ಮೇನ್ಪುರಿ: ಸಮಾಜವಾದಿ ಪಕ್ಷದ ವರಿಷ್ಠ ನಾಯಕ ಮುಲಾಯಂ ಸಿಂಗ್ ಯಾದವ್ ಸೋಮವಾರ (ಏಪ್ರಿಲ್ 01) ರಂದು ಮೇನ್ಪುರಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು.
ಸೋಮವಾರ ಮಧ್ಯಾಹ್ನ ಸುಮಾರು 12.30 ರ ವೇಳೆಗೆ, ಮುಲಾಯಂ ಸಮಾಜವಾದಿ ರಥದಲ್ಲಿ, ಜಿಲ್ಲಾಧಿಕಾರಿ ಕಚೇರಿಯ ಗೇಟ್ ನಂಬರ್ 1ರವರೆಗೂ ತಲುಪಿದರು. ಅಲ್ಲಿಂದ ಖಾಸಗಿ ಕಾರಿನಲ್ಲಿ ಎಸ್ಪಿ ಮುಖಂಡರೊಂದಿಗೆ ಜಿಲ್ಲಾಧಿಕಾರಿ ಕಚೇರಿಯ ಮುಖ್ಯ ದ್ವಾರವನ್ನು ತಲುಪಿದ ಹಿರಿಯ ಮುಖಂಡ ಮುಲಾಯಂ ಸಿಂಗ್ ಯಾದವ್, ಮುಲಾಯಂ ಜಿಲ್ಲಾ ಚುನಾವಣಾಧಿಕಾರಿ ಪಿ.ಕೆ. ಉಪಾಧ್ಯಾಯ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ಈ ವೇಳೆ ಮುಲಾಯಂ ಅವರೊಂದಿಗೆ, ಎಸ್ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ಗೋಪಾಲ್ ಯಾದವ್ ಅವರು ಜೊತೆಯಲ್ಲಿದ್ದರು.
ಅಲ್ಲದೆ, ಸಂಸದ ತೇಜ್ ಪ್ರತಾಪ್ ಯಾದವ್, ಸದರ್ ಶಾಸಕ ರಾಜ್ ಕುಮಾರ್ ಯಾದವ್, ಎಂಎಲ್ಎ ಕರ್ಹಲ್ ಸೋಬ್ರಾನ್ ಸಿಂಗ್ ಯಾದವ್, ಬಿಎಸ್ಪಿ ಜಿಲ್ಲಾಧ್ಯಕ್ಷ ಶುಭಾಂ ಸಿಂಗ್ ಮತ್ತು ವಕೀಲ ದೇವೇಂದ್ರ ಸಿಂಗ್ ಯಾದವ್ ಕೂಡಾ ಇದ್ದರು. ನಾಮನಿರ್ದೇಶನ ಕೋಣೆಯಲ್ಲಿ, ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಎರಡು ನಾಮನಿರ್ದೇಶನ ಪತ್ರಗಳನ್ನು ಜಿಲ್ಲಾ ಚುನಾವಣಾಧಿಕಾರಿಯವರಿಗೆ ಸಲ್ಲಿಸಲಾಯಿತು.
ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ(ಎಸ್ಪಿ) ಅಧಿಕ ಸ್ಥಾನಗಳನ್ನು ವಶಪಡಿಸಿಕೊಳ್ಳಲಿದೆ ಎಂದು ಮುಲಾಯಂ ಸಿಂಗ್ ಯಾದವ್ ಹೇಳಿದ್ದಾರೆ. ಮುಲಾಯಂ ಸಿಂಗ್ ಯಾದವ್ 1996, 2004, 2009 ಮತ್ತು 2014 ರಲ್ಲಿ ಮೇನ್ಪುರಿ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದಿದ್ದಾರೆ.
ಪ್ರಧಾನಿ ಹುದ್ದೆ ಆಕಾಂಕ್ಷಿಯಲ್ಲ:
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ತಾವು ಪ್ರಧಾನಮಂತ್ರಿ ಹುದ್ದೆ ಆಕಾಂಕ್ಷಿಯಲ್ಲ ಎಂದು ತಿಳಿಸಿದ್ದಾರೆ. ಪ್ರಧಾನಮಂತ್ರಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದು ಚುನಾವಣೆ ಬಳಿಕ ತೀರ್ಮಾನವಾಗಲಿದೆ ಎಂದಷ್ಟೇ ಹೇಳಿದರು. ಇದೇ ವೇಳೆ ಕಿರಿಯ ಸಹೋದರ ಶಿವಪಾಲ್ ಸಿಂಗ್ ಯಾದವ್ ಅವರ ಬಗ್ಗೆ ಕೇಳಲಾದ ಪ್ರಶ್ನೆಗೆ ಮುಲಾಯಂ ಉತ್ತರಿಸಲಿಲ್ಲ.