5 ಲಕ್ಷ ಕ್ಕೂ ಅಧಿಕ Zoom ಬಳಕೆದಾರರ ಅಕೌಂಟ್ ಹ್ಯಾಕ್, 10-15 ಪೈಸೆಗೆ ಪಾಸ್ವರ್ಡ್ ಗಳ ಮಾರಾಟ

ಕರೋನಾ ಲಾಕ್‌ಡೌನ್‌ನಿಂದಾಗಿ, ವಿಶ್ವಾದ್ಯಂತ ಜೂಮ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು, ಇದೀಗ  ಗೌಪ್ಯತೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ. ಹೌದು, ಈ ಅಪ್ಲಿಕೇಶನ್ ಬಳಕೆ ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಭದ್ರತಾ ಸಂಸ್ಥೆಗಳು ಎಚ್ಚರಿಕೆ ನೀಡಿವೆ.

Last Updated : Apr 14, 2020, 06:02 PM IST
5 ಲಕ್ಷ ಕ್ಕೂ ಅಧಿಕ Zoom ಬಳಕೆದಾರರ ಅಕೌಂಟ್ ಹ್ಯಾಕ್, 10-15 ಪೈಸೆಗೆ ಪಾಸ್ವರ್ಡ್ ಗಳ ಮಾರಾಟ title=

ವಿಶ್ವಾದ್ಯಂತ ಮಹಾಮಾರಿ ಪಸರಿಸಿದೆ, ಹಲವೆಡೆ ಪ್ರಾಣಹಾನಿ ಸಂಭವಿಸಿದ ಕಾರಣ ಅವ್ಯವಸ್ಥೆ ಉಂಟಾಗಿದೆ. ಹಲವು ದೇಶಗಳಲ್ಲಿ ಲಾಕ್‌ಡೌನ್ ಘೋಷಿಸಲಾಗಿದೆ. ಜನರು ಮನೆಯಲ್ಲಿ ಬಂಧಿಯಾಗಿದ್ದಾರೆ. ಏತನ್ಮಧ್ಯೆ, ಮೊಬೈಲ್ ಆಪ್ ವೊಂದು ಜನರಿಗೆ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಮುಖಾಮುಖಿ ಭೇಟಿಯಾಗಲು ಅವಕಾಶ ಕಲ್ಪಿಸುತ್ತಿದೆ. ಹೌದು ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ಜೂಮ್ (Zoom) ಕೆಲವೇ ಕೆಲವು ದಿನಗಳಲ್ಲಿ ಟ್ರೆಂಡ್ ಸೃಷ್ಟಿಸಿದೆ. ಕೆಲವೇ ದಿನಗಳಲ್ಲಿ ಕೋಟ್ಯಂತರ ಜನರು ಈ ಆಪ್ ಅನ್ನು ಡೌನ್ಲೋಡ್ ಮಾಡಿದ್ದಾರೆ. ಆದರೆ, ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರಬಂದಿದ್ದು, ಈ  ಆ್ಯಪ್‌ನ ಬಳಕೆ ಸೈಬರ್ ವಂಚನೆಗೆ ಕಾರಣವಾಗಬಹುದು ಎಂದು ಭದ್ರತಾ ಸಂಸ್ಥೆಗಳು ಈ ಮೊದಲು ಎಚ್ಚರಿಕೆಯನ್ನು ನೀಡಿದ್ದವು. ಆದರೆ, ಬಹುಶಃ ಇದನ್ನು  ಯಾರೂ ಗಂಭೀರವಾಗಿ ಪರಿಗಣಿಸಿಲ್ಲ ಎಂಬಂತೆ ಕಾಣುತ್ತಿದ್ದು, ಇದೀಗ ಸುಮಾರು 5 ಲಕ್ಷಕ್ಕೂ ಅಧಿಕ ಜನರ  ಜೂಮ್ ಖಾತೆಗಳು ಹ್ಯಾಕರ್‌ಗಳ ವಶಕ್ಕೆ ಸೇರಿವೆ ಎಂದು ವರದಿಯಾಗಿದೆ.

ಕರೋನಾ ಲಾಕ್‌ಡೌನ್‌ನಿಂದಾಗಿ, ವಿಶ್ವಧ್ಯಂತ ಜೂಮ್ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚಾಗಿದ್ದು ಮತ್ತು ಇದೀಗ  ಗೌಪ್ಯತೆಗೆ ಸಂಬಂಧಿಸಿದಂತೆ ದೊಡ್ಡ ಸಮಸ್ಯೆ ಎದುರಾಗಿದೆ. ಬ್ಲಿಪಿಂಗ್ ಕಂಪ್ಯೂಟರ್‌ ಪ್ರಕಟಿಸಿರುವ ಒಂದು ವರದಿಯ ಪ್ರಕಾರ, 5 ಲಕ್ಷಕ್ಕೂ ಅಧಿಕ ಜೂಮ್ ಖಾತೆಗಳನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟಕ್ಕೆ ಇಡಲಾಗಿದೆ ಎನ್ನಲಾಗಿದೆ. ಇಲ್ಲಿ ಆಶ್ಚರ್ಯಕರ ಸಂಗತಿಯೆಂದರೆ, ಲಕ್ಷಾಂತರ ಜನರ ಡೇಟಾವನ್ನು ಜುಜಬಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ ಎಂದೂ ಕೂಡ ಹೇಳಲಾಗಿದೆ. ಅನೇಕ ಜೂಮ್ ಬಳಕೆದಾರರ ಡೇಟಾವನ್ನು ಉಚಿತವಾಗಿ ಮಾರಾಟ ಮಾಡಲಾಗಿದೆ. ವರದಿಯ ಪ್ರಕಾರ, ತಮ್ಮ ವೈಯಕ್ತಿಕ ಡೇಟಾ ಮಾರಾಟವಾಗುತ್ತಿದೆ ಎಂಬುದು ಜೂಮ್ ಬಳಕೆದಾರರಿಗೂ ಕೂಡ ತಿಳಿದಿಲ್ಲ. ಇದರಲ್ಲಿ, ಬಳಕೆದಾರರ ಹೆಸರು, ಪಾಸ್‌ವರ್ಡ್ ಮತ್ತು ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ.

ಜೂಮ್ ಬಳಕೆದಾರರ ಮಾಹಿತಿಯನ್ನು ಹ್ಯಾಕ್ ಮಾಡಲು Credential Staffing Method ಬಳಸಲಾಗುತ್ತದೆ. ಇದರಲ್ಲಿ ಜೂಮ್ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡಲಾಗಿದ್ದು, ಬಳಕೆದಾರರ ಲಾಗಿನ್ ವಿವರಗಳನ್ನು ಬಳಸಿ, ಹ್ಯಾಕರ್‌ಗಳು ಖಾತೆ ಪ್ರವೇಶವನ್ನು ಪಡೆಯುತ್ತಿದ್ದಾರೆ. ಬಳಕೆದಾರರ ಪ್ರವೇಶದ ಆಧಾರದ ಮೇಲೆ, ಕಂಪೈಲ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಇದನ್ನು ಡಾರ್ಕ್ ವೆಬ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಸೈಬರ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸಂಸ್ಥೆ Cyble ಪ್ರಕಾರ, ಅನೇಕ ಜೂಮ್ ಖಾತೆಗಳ ವಿವರಗಳನ್ನು ಹ್ಯಾಕರ್ ಫೋರಂನಲ್ಲಿ ಮಾರಾಟಕ್ಕೆ ಅಪ್‌ಲೋಡ್ ಮಾಡಲಾಗಿದೆ.

ಸುಮಾರು 5 ಲಕ್ಷಕ್ಕೂ ಅಧಿಕ ಜೂಮ್ ಬಳಕೆದಾರ ಕ್ರೆಡೆನ್ಸಿಯಲ್ಸ್ ಗಳನ್ನು ಖರೀದಿಸಿರುವುದಾಗಿ ಸೈಬಲ್ ಹೇಳಿಕೊಂಡಿದೆ. ಆದರೆ ಬಳಕೆದಾರರನ್ನು ಜಾಗೃತಗೊಳಿಸಲು ಈ ರೀತಿ ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಈ ಡೇಟಾವನ್ನು ಪ್ರತಿ ಖಾತೆಗೆ 10- 15 ಪೈಸೆ ಬೆಲೆಗೆ ಖರೀದಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇಷ್ಟಾದರೂ ಕೂಡ ಜೂಮ್ ತನ್ನ ಬಳಕೆದಾರರಿಗೆ ಡೇಟಾ ಬ್ರೀಚ್ ಕುರಿತು ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಒಂದು ವೇಳೆ ನೀವೂ ಕೂಡ ನೀವು ಜೂಮ್ ಖಾತೆಯನ್ನು ಬಳಸುತ್ತಿದ್ದಾರೆ ಕೂಡಲೇ ನಿಮ್ಮ ಖಾತೆಯ ಪಾಸ್‌ವರ್ಡ್ ಅನ್ನು ಬದಲಾಯಿಸಿ ಮತ್ತು ಬಲವಾದ ಪಾಸ್‌ವರ್ಡ್ ಅನ್ನು ಇರಿಸಿ.

ಡೇಟಾ ಬ್ರೀಚ್‌ನಲ್ಲಿ ನಿಮ್ಮ ಇಮೇಲ್ ಐಡಿಯ ಪಾಸ್‌ವರ್ಡ್ ಸೋರಿಕೆಯಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ನೀವು Have I Been Pwned ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅಲ್ಲಿ ನಿಮ್ಮ ಇಮೇಲ್ ಐಡಿಯನ್ನು ನಮೂದಿಸಬಹುದು. ಇದರಿಂದ ಡೇಟಾ ಸೋರಿಕೆಯಲ್ಲಿ ನಿಮ್ಮ ಇ-ಮೇಲ್ ಐಡಿಗೆ ಸಂಬಂಧಿಸಿದ ಯಾವುದೇ ಮಾಹಿತಿ ಸೋರಿಕೆಯಾಗಿದೆಯೇ ಅಥವಾ ಇಲ್ಲ ಎಂಬುದು ಪತ್ತೆಯಾಗಲಿದೆ. ಮಾಹಿತಿ ತಂತ್ರಜ್ಞಾನದ ಅತಿ ದೊಡ್ಡ ಕಂಪನಿಯಾಗಿರುವ ಗೂಗಲ್ ಕೂಡ ತನ್ನ ನೌಕರರಿಗೆ zoom ಆಪ್ ಬಳಸದೆ ಇರಲು ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದು, ಇದರ ಹಿಂದೆಯೂ ಕೂಡ ಹ್ಯಾಕಿಂಗ್ ಕಾರಣವಾಗಿದೆ. ಜರ್ಮನಿ ಸಇರ್ದಂತೆ ಹಲವು ದೇಶಗಳೂ ಕೂಡ ಈ ಆಪ್ ಬಳಕೆಯ ಮೇಲೆ ನಿಷೇಧ ವಿಧಿಸಿವೆ. ಜರ್ಮನಿಯನ್ನು ಹೊರತುಪಡಿಸಿ, ತೈವಾನ್, ಸ್ವಿಟ್ಜರ್ಲ್ಯಾಂಡ್, ಸಿಂಗಾಪುರ್ ಗಳಲ್ಲಿಯೂ ಕೂಡ Zoom ಮೇಲೆ ನಿಷೇಧ ವಿಧಿಸಲಾಗಿದೆ. ಗೂಗಲ್, ಸ್ಪೇಸ್ ಎಕ್ಸ್, ಟೆಸ್ಲಾ  ಹಾಗೂ ನ್ಯೂಯಾರ್ಕ್ ನ ಶೈಕ್ಷಣಿಕ ಸಂಸ್ಥೆಗಳೂ ಕೂಡ ಇದರ ಬಳಕೆಯ ಮೇಲೆ ತಡೆ ವಿಧಿಸಿವೆ.

Trending News