ನವದೆಹಲಿ: ದೇಶದ ಬಹುತೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿರುವವರಲ್ಲಿ ಮೇಲ್ವರ್ಗದ ಏಕಸ್ವಾಮವೇ ಹೆಚ್ಚಿಗೆ ಇದೆ. ಆದರೆ ಈಗ ಇದೇ ಮೊದಲ ಬಾರಿಗೆ ಅಧಿಕ ಪ್ರಮಾಣದಲ್ಲಿ ಹಿಂದುಳಿದ ಶೋಷಿತ ಸಮುದಾಯಗಳು ಉನ್ನತ ಶಿಕ್ಷಣದಲ್ಲಿ ಪ್ರವೇಶಾತಿ ಪಡೆಯುತ್ತಿರುವ ವಿಚಾರವನ್ನು ಈಗ ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ.
ಈ ಬಾರಿ ಮೇಲ್ವರ್ಗದ ವಿದ್ಯಾರ್ಥಿಗಳ ಪ್ರವೇಶಾತಿಯ ಸಂಖ್ಯೆ ಶೇ 50 ಕ್ಕಿಂತ ಕಡಿಮೆ ಇದೆ. ಈ ವಿಷಯದ ಕುರಿತಾಗಿ ಅಧ್ಯಯನವೊಂದು ವರದಿಯನ್ನು ಬಹಿರಂಗಪಡಿಸಿದೆ.ದೆಹಲಿ ವಿವಿ ಪ್ರಾಧ್ಯಾಪಕರಾಗಿರುವ ಸತೀಶ್ ದೇಶಪಾಂಡೆ ಮತ್ತು ಅಪೂರ್ವಾನಂದ ಅವರ 'ಪ್ರಸಕ್ತ ಉನ್ನತ ಶಿಕ್ಷಣದಲ್ಲಿ ಹೊರಗೊಳ್ಳುವಿಕೆ' (Exclusion in Indian Higher Education Today) ಎನ್ನುವ ಅಧ್ಯಯನದಲ್ಲಿ ಈ ಸಂಗತಿ ಬಹಿರಂಗವಾಗಿದೆ. ಈ ಅಧ್ಯಯನದ ಪ್ರಕಾರ 2010-11 ರಿಂದ 2015-16 ರ ಅವಧಿಯಲ್ಲಿ ದೇಶದ ಶೇ 20 ರಷ್ಟಿರುವ ಮೇಲ್ವರ್ಗದ ವಿದ್ಯಾರ್ಥಿಗಳ ದಾಖಲಾತಿಯ ಪ್ರಮಾಣವು ಇದೇ ಮೊದಲ ಭಾರಿಗೆ ಶೇ.51 ರಿಂದ ಶೇ.40,6ಕ್ಕೆ ಇಳಿದಿದೆ ಎಂದು ತಿಳಿದಿದೆ.
ಈ ವರದಿ ಪ್ರಕಾರ ಮಹಿಳೆಯರ ದಾಖಲಾತಿ 44 ರಿಂದ 46ಕ್ಕೆ, ಪ,ಪಂಗಡ 4.4 ರಿಂದ 4,9ಕ್ಕೆ, ಪ.ಜಾತಿ ಶೇ.11 ರಿಂದ 13.9ಕ್ಕೆ, ಒಬಿಸಿ ಶೇ,27.6 ರಿಂದ 33.8ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಇನ್ನು ಅಲ್ಪಸಂಖ್ಯಾತರಾಗಿರುವ ಮುಸ್ಲಿಂ ಈ ದೇಶದ ಶೇ 14 ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಆದರೆ ಅವರ ಪ್ರಾತಿನಿಧ್ಯತೆ ಶೇ.3.8 ರಿಂದ 4.7ಕ್ಕೆ ಹೆಚ್ಚಳವಾಗಿದೆ. ಅಂಗವಿಕಲರು 0.19 ರಿಂದ 0.21ಕ್ಕೆ ಹೆಚ್ಚಳವಾಗಿದೆ ಎಂದು ಅಧ್ಯಯನ ತಿಳಿಸಿದೆ.