ನವ ದೆಹಲಿ: ನೂತನ ವಿಶ್ವಸುಂದರಿ ಮಾನುಷಿ ಚಿಲ್ಲರ್ ಇಂದು ಬೆಳಿಗ್ಗೆ ಕುಟುಂಬ ಸಮೇತರಾಗಿ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಸಾಂಪ್ರದಾಯಿಕ ಭಾರತೀಯ ಉಡುಪಾದ ಬಿಳಿ ಅನಾರ್ಕಾಲಿ ಚೂಡಿದಾರ್ ಧರಿಸಿ, ಉದ್ದನೆಯ ಕಿವಿಯೋಲೆಗಳನ್ನು ತೊಟ್ಟಿದ್ದ ಮಾನುಷಿ ಸುಂದರವಾಗಿ ಕಾಣುತ್ತಿದ್ದರು. ಅಷ್ಟೇ ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಸಂತಸ ತಂದಿರುವುದಾಗಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.
ಚೀನಾದ ಸಾನ್ಯಾ ಸಿಟಿಯಲ್ಲಿ ಇದೇ ತಿಂಗಳ 18ರಂದು ನಡೆದಿದ್ದ ಮಿಸ್ ವರ್ಲ್ಡ್-2017 ಸ್ಪರ್ಧೆಯಲ್ಲಿ 21ವರ್ಷದ ಮಾನುಷಿ ಛಿಲ್ಲರ್ ವಿಶ್ವಸುಂದರಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. 108 ರಾಷ್ಟ್ರಗಳ ಸುಂದರಿಯರನ್ನು ಹಿಂದಿಕ್ಕಿ ಮಾನುಷಿ ಮಿಸ್ ವರ್ಲ್ಡ್ ಆಗಿ ಹೊರಹೊಮ್ಮಿದ್ದರು. 17 ವರ್ಷಗಳ ಬಳಿಕ ಭಾರತಕ್ಕೆ ವಿಶ್ವಸುಂದರಿ ಪಟ್ಟ ತಂದು ಕೊಟ್ಟ ಹೆಗ್ಗಳಿಕೆಗೆ ಮಾನುಷಿ ಪಾತ್ರರಾಗಿದ್ದಾರೆ.