ನವದೆಹಲಿ: ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಹೊಸದಾಗಿ ಚುನಾಯಿತರಾದ 105 ಶಾಸಕರು ಬುಧವಾರ ಮಧ್ಯಾಹ್ನ ಮುಂಬೈನಲ್ಲಿ ನಡೆಯಲಿರುವ ಸಭೆಯಲ್ಲಿ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕರನ್ನು ಆಯ್ಕೆ ಮಾಡಲಿದ್ದಾರೆ.
ಕಳೆದ ಐದು ವರ್ಷಗಳು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಸರ್ಕಾರ ಮುನ್ನಡೆಸಿದ್ದ ದೇವೇಂದ್ರ ಫಡ್ನವೀಸ್ ಅವರನ್ನೇ ಈಗಲೂ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ. ಇಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೇಂದ್ರ ಸಚಿವ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಪಕ್ಷದ ಉಪಾಧ್ಯಕ್ಷ ಅವಿನಾಶ್ ರೈ ಖನ್ನಾ ಕೂಡಾ ಉಪಸ್ಥಿತರಿರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸರ್ಕಾರದಲ್ಲಿ ಸ್ಥಾನ ಹಂಚಿಕೆ ಕುರಿತು ಬಿಜೆಪಿ-ಶಿವಸೇನೆ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದೆ. ಹೊಸ ವಿಧಾನಸಭೆಯಲ್ಲಿ ಕ್ರಮವಾಗಿ 105 ಮತ್ತು 56 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಮತ್ತು ಶಿವಸೇನಾದಲ್ಲಿ ಅಧಿಕಾರ ಹಂಚಿಕೆ ಕುರಿತು ಭಿನ್ನಾಭಿಪ್ರಾಯ ಮೂಡಿದೆ. ಶಿವಸೇನೆ ಮುಖ್ಯಮಂತ್ರಿ ಪದವಿಯನ್ನು ತನ್ನ ಪಕ್ಷಕ್ಕೆ ನೀಡುವಂತೆ ಒತ್ತಾಯಿಸಿದೆ. ಅಲ್ಲದೆ 50:50 ಸೂತ್ರದಲ್ಲಿ ಸ್ಥಾನ ಹಂಚಿಕೆ ಮಾಡಿಕೊಳ್ಳಲು ಒತ್ತಾಯಿಸಿದೆ. ಆದರೆ ಇನ್ನೂ ಐದು ವರ್ಷಗಳ ಕಾಲ ತಾನೇ ಸಿಎಂ ಆಗಿ ಮುಂದುವರೆಯುವುದಾಗಿ ಫಡ್ನವೀಸ್ ಹೇಳಿದ್ದಾರೆ. ಅದಲ್ಲದೆ 50:50 ಸೂತ್ರಕ್ಕೂ ಬಿಜೆಪಿ ಒಪ್ಪಿಗೆ ಸೂಚಿಸಿಲ್ಲ.
ಇವೆಲ್ಲದರ ಮಧ್ಯೆ ಕೆಲವು ಸಣ್ಣ ಪಕ್ಷಗಳು ಹಾಗೂ ಸ್ವತಂತ್ರರ ಬೆಂಬಲ ಪಡೆದು ಸರ್ಕಾರ ರಚಿಸುವುದಾಗಿ ಬಿಜೆಪಿ ವಿಶ್ವಾಸ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಶಿವಸೇನೆ ಪಕ್ಷಕ್ಕೆ ಇತರ ಆಯ್ಕೆಗಳಿವೆ, ಆದರೆ ಅದರ "ಅಧಿಕಾರಕ್ಕಾಗಿ ಹಸಿದಿಲ್ಲ" ಎಂದು ಹೇಳಿದರು.
ಆದರೆ, ಶಿವಸೇನೆ ಮಹಾರಾಷ್ಟ್ರ ಸರ್ಕಾರದ ಭಾಗವಾಗಲಿದೆ ಎಂದು ಫಡ್ನವೀಸ್ ನಂತರ ಉಲ್ಲೇಖಿಸಿದ್ದಾರೆ.