ಭೋಪಾಲ್: ಮಧ್ಯಪ್ರದೇಶದ ಚುನಾವಣಾ ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಗಿದ್ದು, ಸರ್ಕಾರ ರಚಿಸಲು ಕಾಂಗ್ರೆಸ್ ಸಜ್ಜಾಗಿದ್ದರೂ ಮುಖ್ಯಮಂತ್ರಿ ಪಟ್ಟ ಯಾರಿಗೆ ನೀಡಬೇಕೆಂಬುದರ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ. ಆದರೆ ಕಮಲ್ನಾಥ್ಗೆ ಸಿಎಂ ಪಟ್ಟ ನೀಡುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
ಮಧ್ಯಪ್ರದೇಶ ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಕಮಲ್ನಾಥ್ ಹಾಗೂ ಯುವ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ನಡುವೆ ಸಿಎಂ ಗಾದಿಗೆ ತೀವ್ರ ಪೈಪೋಟಿ ಇತ್ತು. ಆದರೆ ಅಂತಿಮವಾಗಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕಮಲ್ನಾಥ್ ಅವರತ್ತ ಒಲವು ತೋರಿದ್ದು, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಅಂತಿಮ ಘೋಷಣೆ ಮಾಡುವ ನಿರೀಕ್ಷೆ ಇದೆ.
ಈ ಕುರಿತು ದೆಹಲಿಯಲ್ಲಿಂದು ಮಧ್ಯಪ್ರದೇಶದ ನಾಯಕರೊಂದಿಗೆ ರಾಹುಲ್ ಗಾಂಧಿ ಪ್ರಮುಖ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸೇರಿದಂತೆ ಹಲವು ನಾಯಕರು ಭಾಗಿಯಾಗಲಿದ್ದಾರೆ.
ರಾಜ್ಯದ ಸಿಎಂ ಯಾರಾಗಬೇಕು ಎಂಬ ಪ್ರಶ್ನೆಯನ್ನು ಕೇಳಿ ರಾಹುಲ್ ಗಾಂಧಿ ಪಕ್ಷದ 7 ಲಕ್ಷ ಕಾರ್ಯಕರ್ತರಿಗೆ ಶಕ್ತಿ ಆಯಪ್ ಮೂಲಕ ಕಳುಹಿಸಿದ್ದರು. ಇದಕ್ಕೆ ಕಾರ್ಯಕರ್ತರು ರಹಸ್ಯವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ.
ಈ ಸಭೆಯಲ್ಲಿ ಮಂತ್ರಿಮಂಡಲ ರಚನೆ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆ ಇದೆ. ಸಭೆಯಲ್ಲಿ ಮುಖ್ಯಮಂತ್ರಿ ಹೆಸರನ್ನು ಅಂತಿಮಗೊಳಿಸುವುದಲ್ಲದೆ, ಪದಗ್ರಹಣಕ್ಕೆ ಸಮಯನಿಗದಿ ಮಾಡುವ ನಿರೀಕ್ಷೆ ಇದೆ. ಸಭೆಯ ನಂತರ, ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಮಧ್ಯಾಹ್ನ ಭೋಪಾಲ್ಗೆ ಹಿಂದಿರುಗಲಿದ್ದಾರೆ.
ಮಧ್ಯಪ್ರದೇಶದ ಚುನಾವಣಾ ಫಲಿತಾಂಶವನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಗಿದ್ದು, ಸರಳ ಬಹುಮತ ಗಳಿಸಲು ಕಾಂಗ್ರೆಸ್ಗೆ ಎರಡು ಸ್ಥಾನಗಳ ಕೊರತೆ ಇತ್ತು. ಆದರೆ ಬಿಎಸ್ಪಿಯ ಮೂವರು, ಸಮಾಜವಾದಿ ಪಕ್ಷದ ಒಬ್ಬರು ಹಾಗೂ ನಾಲ್ವರು ಪಕ್ಷೇತರರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಘೋಷಿಸಿದ್ದಾರೆ.