ಶುಕ್ರವಾರ, ಜನವರಿ 26ರಂದು ಭಾರತ ತನ್ನ 74ನೇ ಗಣರಾಜ್ಯೋತ್ಸವವನ್ನು ಪೂರ್ಣಗೊಳಿಸಿ, 'ಅಮೃತಕಾಲ' ಎಂದು ಕರೆಯಲಾಗುವ, ಗಣರಾಜ್ಯದ 75ನೇ ವರ್ಷಕ್ಕೆ ಕಾಲಿಡಲಿದೆ. ಗಣರಾಜ್ಯೋತ್ಸವದ ದಿನ ಪ್ರತಿಯೊಬ್ಬ ನಾಗರಿಕನೂ ದೇಶಕ್ಕೆ ಎಷ್ಟು ಮುಖ್ಯನಾಗುತ್ತಾನೆ ಎಂಬುದನ್ನು ಆಲೋಚಿಸುವ ದಿನವಾಗಿದೆ. ಈ ಬಾರಿಯ ಗಣರಾಜ್ಯೋತ್ಸವಕ್ಕೆ ಫ್ರಾನ್ಸ್ ಅಧ್ಯಕ್ಷರಾದ ಇಮ್ಮಾನುವೆಲ್ ಮಾಕ್ರೋನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.
2024ರ ಗಣರಾಜ್ಯೋತ್ಸವ ಪಥ ಸಂಚಲನ ಜನವರಿ 26ರಂದು ಬೆಳಗ್ಗೆ 10:30ಕ್ಕೆ ಆರಂಭಗೊಳ್ಳಲಿದೆ. ಈ ಪಥ ಸಂಚಲನ ವಿಜಯ ಚೌಕದಿಂದ ಕರ್ತವ್ಯ ಪಥದ ತನಕ ಸಾಗಲಿದೆ. ಸಮಾರಂಭದಲ್ಲಿ 77,000 ಜನರು ಪಾಲ್ಗೊಳ್ಳಬಹುದಾಗಿದ್ದು, ಸಾರ್ವಜನಿಕರಿಗೆ 42,000 ಆಸನಗಳ ಲಭ್ಯತೆಯಿದೆ.
2024ರ 75ನೇ ಗಣರಾಜ್ಯೋತ್ಸವದಲ್ಲಿ ಮಹಿಳೆಯರ ಕುರಿತು ಹೆಚ್ಚಿನ ಗಮನ ನೀಡಲಾಗಿದ್ದು, 'ವಿಕಸಿತ ಭಾರತ' ಮತ್ತು 'ಭಾರತ - ಪ್ರಜಾಪ್ರಭುತ್ವದ ತಾಯಿ' ಎಂಬ ಥೀಮ್ ಹೊಂದಿದೆ. ಈ ಎರಡು ಘೋಷವಾಕ್ಯಗಳು ಭಾರತವನ್ನು ಪ್ರಜಾಪ್ರಭುತ್ವದ ತಾಯಿ ಎನ್ನುವ ಪ್ರಧಾನಿ ಮೋದಿಯವರ ದೃಷ್ಟಿಕೋನಕ್ಕೆ ಪೂರಕವಾಗಿವೆ.
ಗಣರಾಜ್ಯೋತ್ಸವ ಪಥ ಸಂಚಲನದ ಆರಂಭದಲ್ಲಿ ನೂರು ಮಹಿಳಾ ಸಂಗೀತ ಕಲಾವಿದರು ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸಲಿದ್ದಾರೆ. 75ನೇ ಗಣರಾಜ್ಯೋತ್ಸವದ ವಿಶೇಷ ಅಂಶವೆಂದರೆ, ಸಂಪೂರ್ಣ ಮಹಿಳೆಯರನ್ನೇ ಹೊಂದಿರುವ, ಸೇನೆಯ ಮೂರೂ ವಿಭಾಗಗಳ ತಂಡ ಪಥ ಸಂಚಲನದಲ್ಲಿ ಭಾಗವಹಿಸಲಿದೆ. ಅದರೊಡನೆ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳೂ (ಸಿಎಪಿಎಫ್) ತಮ್ಮ ತಂಡಗಳಲ್ಲಿ ಮಹಿಳೆಯರನ್ನು ಹೊಂದಿರಲಿವೆ. ಇದು ಭಾರತೀಯ ಮಹಿಳೆಯರ ಸಾಮರ್ಥ್ಯ ಮತ್ತು ಕೌಶಲಗಳನ್ನು ಗೌರವಿಸುವ ಹೆಜ್ಜೆಯಾಗಿದೆ.
ಗಣರಾಜ್ಯೋತ್ಸವ ಸಮಾರಂಭದಲ್ಲಿ, ಸಂಸ್ಕೃತಿ ಸಚಿವಾಲಯ 'ಅನಂತ ಸೂತ್ರ' ಎಂಬ ಹೆಸರಿನಲ್ಲಿ ಒಂದು ವಿಶಿಷ್ಟ ವಸ್ತ್ರ ಪ್ರದರ್ಶನ ನಡೆಸಲಿದೆ. ವೀಕ್ಷಕರ ಆಸನಗಳ ಹಿಂಭಾಗದಲ್ಲಿ ಅಳವಡಿಸಲಾಗುವ ಈ ಅನಂತ ಸೂತ್ರದಲ್ಲಿ, ಭಾರತದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತಯಾರಿಸಲಾದ, ವಿವಿಧ ಮಾದರಿಯಲ್ಲಿ ಉಡಲ್ಪಡುವ 1,900 ಸಾಂಪ್ರದಾಯಿಕ ಸೀರೆಗಳನ್ನು ಮರದ ಚೌಕಟ್ಟುಗಳಲ್ಲಿಟ್ಟು, ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾಗುತ್ತದೆ. ಈ ಸೀರೆಗಳ ನೇಯುವಿಕೆ ಮತ್ತು ಕಸೂತಿಯ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಬಯಸುವ ಜನರಿಗಾಗಿ ಕ್ಯುಆರ್ ಕೋಡ್‌ಗಳನ್ನು ಅಳವಡಿಸಲಾಗುತ್ತದೆ.
ಭಾರತ ಮತ್ತು ಫ್ರಾನ್ಸ್ ನಡುವೆ ಮಾತುಕತೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಫ್ರಾನ್ಸ್ ಅಧ್ಯಕ್ಷ ಇಮ್ಮಾನುವೆಲ್ ಮಾಕ್ರೋನ್ ಅವರು ಗಣರಾಜ್ಯೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಭಾರತ ಪ್ರಸ್ತುತ ಫ್ರಾನ್ಸ್‌ನಿಂದ ಬಿಲಿಯನ್ ಗಟ್ಟಲೆ ಡಾಲರ್ ಮೊತ್ತ ಪಾವತಿಸಿ, ತನ್ನ ಸೇನೆಗಾಗಿ ಫ್ರೆಂಚ್ ಯುದ್ಧ ವಿಮಾನಗಳು ಮತ್ತು ಸಬ್‌ಮರೀನ್‌ಗಳನ್ನು ಖರೀದಿಸಲು ಮಾತುಕತೆ ನಡೆಸುತ್ತಿದೆ.
ಭಾರತ ಮತ್ತು ಫ್ರಾನ್ಸ್ ಎರಡೂ ದೇಶಗಳ ಅಧಿಕಾರಿಗಳು ಭಾರತಕ್ಕೆ ಮಾಕ್ರೋನ್ ಭೇಟಿ ಕೇವಲ ಔಪಚಾರಿಕವಷ್ಟೇ ಆಗಿದ್ದು, ಯಾವುದೇ ಮಹತ್ವದ ಒಪ್ಪಂದಗಳನ್ನು ಪೂರ್ಣಗೊಳಿಸುವ ಉದ್ದೇಶ ಹೊಂದಿಲ್ಲ ಎಂದು ಖಚಿತಪಡಿಸಿದ್ದಾರೆ. ಭಾರತದ ಎರಡನೇ ಅತಿದೊಡ್ಡ ಆಯುಧ ಪೂರೈಕೆದಾರ ರಾಷ್ಟ್ರವಾಗಿರುವ ಫ್ರಾನ್ಸ್ ಅತ್ಯಂತ ದೀರ್ಘಕಾಲದಿಂದಲೂ ಭಾರತದೊಡನೆ ಘನಿಷ್ಠ ಸಂಬಂಧ ಹೊಂದಿದೆ. ಗಮನಾರ್ಹ ವಿಚಾರವೆಂದರೆ, 1998ರಲ್ಲಿ ಭಾರತ ಅಣ್ವಸ್ತ್ರ ಪರೀಕ್ಷೆ ನಡೆಸಿದಾಗ ಭಾರತದ ಮೇಲೆ ನಿರ್ಬಂಧ ಹೇರದ ಏಕೈಕ ಐರೋಪ್ಯ ರಾಷ್ಟ್ರ ಫ್ರಾನ್ಸ್ ಆಗಿತ್ತು.
ಪ್ರಧಾನಿ ನರೇಂದ್ರ ಮೋದಿಯವರು ಜುಲೈ ತಿಂಗಳಲ್ಲಿ ಫ್ರಾನ್ಸ್‌ನ ಬಾಸ್ಟಿಲ್ ಡೇ ಸಮಾರಂಭಕ್ಕೆ ಅತಿಥಿಯಾಗಿ ತೆರಳುವ ಮುನ್ನವೇ, ಭಾರತ ಸರ್ಕಾರ ಪೂರ್ವಭಾವಿಯಾಗಿ 80,000 ಕೋಟಿ ರೂಪಾಯಿ ವೆಚ್ಚದಲ್ಲಿ (9.62 ಬಿಲಿಯನ್ ಡಾಲರ್) 26 ರಫೇಲ್ ಯುದ್ಧ ವಿಮಾನಗಳ ಖರೀದಿ ನಡೆಸಲು ಮತ್ತು ಜಂಟಿ ಸಹಯೋಗದಲ್ಲಿ ಮೂರು ಸ್ಕಾರ್ಪೀನ್ ವರ್ಗದ ಸಬ್‌ಮರೀನ್‌ಗಳನ್ನು ನಿರ್ಮಿಸಲು ಅನುಮತಿ ಸೂಚಿಸಿತ್ತು. ಆದರೆ, ಈ ಒಪ್ಪಂದಗಳು ಇನ್ನೂ ಅಂತಿಮಗೊಳ್ಳುವುದು ಬಾಕಿಯಿದೆ. ಫ್ರಾನ್ಸ್ ಭಾರತದೊಡನೆ ಬಾಹ್ಯಾಕಾಶ ಮತ್ತು ಅಣ್ವಸ್ತ್ರ ವಲಯದಲ್ಲೂ ಸಹಯೋಗವನ್ನು ವಿಸ್ತರಿಸಲು ಉತ್ಸಾಹ ಹೊಂದಿದೆ.
ಗಣರಾಜ್ಯೋತ್ಸವದ ಸಂದರ್ಭದಲ್ಲಿ, ಫ್ರಾನ್ಸ್ ಅಧ್ಯಕ್ಷ ಮಾಕ್ರೋನ್ ಭಾರತಕ್ಕೆ ಭೇಟಿ ನೀಡುವುದನ್ನು ಫ್ರಾನ್ಸ್ ಹಲವು ವರ್ಷಗಳಿಂದ ತಾನು ನವದೆಹಲಿಯೊಡನೆ ಹೊಂದಿರುವ ಉತ್ತಮ ಕಾರ್ಯತಂತ್ರದ ಬಾಂಧವ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ಅವಕಾಶವೆಂದು ಭಾವಿಸಿದೆ. ಆದರೆ, ಫ್ರೆಂಚ್ ಅಧ್ಯಕ್ಷರ ಸಲಹೆಗಾರರು ಈಗಾಗಲೇ ಮಾಧ್ಯಮಗಳಿಗೆ ಈ ಬಾರಿಯ ಮಾಕ್ರೋನ್ ಭೇಟಿಯಲ್ಲಿ ಯಾವುದೇ ಹೊಸದಾದ ರಕ್ಷಣಾ ಒಪ್ಪಂದಗಳು ನೆರವೇರುವ ನಿರೀಕ್ಷೆಗಳಿಲ್ಲ ಎಂದು ತಿಳಿಸಿದ್ದಾರೆ.
ಭಾರತ ಕಳೆದ 40 ವರ್ಷಗಳಿಂದ ಫ್ರೆಂಚ್ ಯುದ್ಧ ವಿಮಾನಗಳನ್ನು ಬಳಸುತ್ತಿದೆ. ಡಸಾಲ್ಟ್ ಏವಿಯೇಷನ್ ಸಂಸ್ಥೆಯಿಂದ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಮುನ್ನ, ಭಾರತ 1980ರ ದಶಕದಲ್ಲಿ ಮಿರೇಜ್ ಯುದ್ಧ ವಿಮಾನಗಳನ್ನು ಖರೀದಿಸಿತ್ತು. ಭಾರತೀಯ ವಾಯುಪಡೆ ಇಂದಿಗೂ ಮಿರೇಜ್ ಯುದ್ಧ ವಿಮಾನದ ಎರಡು ಸ್ಕ್ವಾಡ್ರನ್‌ಗಳನ್ನು ಹೊಂದಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಮೋದಿ ಮತ್ತು ಮಾಕ್ರೋನ್ ನಡುವಿನ ಭೇಟಿ ಕಳೆದ ಮೇ ತಿಂಗಳ ಬಳಿಕದ ಐದನೇ ಭೇಟಿಯಾಗಲಿದೆ.
ತನ್ನ 40 ಗಂಟೆಗಳ ಅವಧಿಯ ಅಧಿಕೃತ ಭೇಟಿಯ ಸಂದರ್ಭದಲ್ಲಿ, ಮಾಕ್ರೋನ್ ಅವರು ಔಷಧೀಯ ವಲಯ, ಆಟೋಮೊಬೈಲ್, ಬಾಹ್ಯಾಕಾಶ, ಇಂಧನ, ಹಾಗೂ ಹೈಡ್ರೋಜನ್ ಉದ್ಯಮಗಳು ಸೇರಿದಂತೆ, ವಿವಿಧ ವಲಯಗಳ ಉದ್ಯಮ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ಭಾರತ ಮತ್ತು ಫ್ರೆಂಚ್ ಸರ್ಕಾರಗಳ ಅಧಿಕಾರಿಗಳು ತಿಳಿಸಿದ್ದಾರೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.