ಮುಂಗರ್: ಜಮುಯಿ ಲೋಕಸಭಾ ಕ್ಷೇತ್ರದಲ್ಲಿ ಲೋಕ್ ಜನಶಕ್ತಿ ಪಕ್ಷ(ಎಲ್ಜಿಪಿ)ದ ಅಭ್ಯರ್ಥಿ ಚಿರಾಗ್ ಪಾಸ್ವಾನ್ ಪರವಾಗಿ ಚುನಾವಣಾ ಪ್ರಚಾರ ಮಾಡಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಗಮಿಸಿದ್ದರು.
ಈ ವೇಳೆ ಸಾರ್ವಜನಿಕ ಸಭೆಯಲ್ಲಿ ನೂರಾರು ಮಕ್ಕಳು ಜಯಾಯಿಸಿದ್ದರು. ಚುನಾವಣಾ ಸಂಬಂಧಿತ ಸಾರ್ವಜನಿಕ ಸಭೆಯಲ್ಲಿ ಇಷ್ಟೊಂದು ಮಕ್ಕಳನ್ನು ನೋಡಿ ಆಶ್ಚರ್ಯಗೊಂಡು ಈ ಸಭೆಯಲ್ಲಿ ನೀವೇಕೆ ಪಾಲ್ಗೊಂಡಿದ್ದೀರಿ ಎಂದು ಕೇಳಿದಾಗ ಆ ಮಕ್ಕಳು ನೀಡಿದ ಉತ್ತರ ತಿಳಿದರೆ ದಿಗ್ಭ್ರಮೆಗೊಳ್ಳುತ್ತೀರಿ.
ಗುರುವಾರ, ಜಮುಯಿ ಲೋಕಸಭಾ ಕ್ಷೇತ್ರದ ಮುಂಗರ್ ಜಿಲ್ಲೆಯ ತಾರಾಪುರ್ನ ಆರ್ಎಸ್ ಕಾಲೇಜ್ ಗ್ರೌಂಡ್ನಲ್ಲಿ ಚಿರಾಗ್ ಪಾಸ್ವಾನ್ ಪರವಾಗಿ ಚುನಾವಣಾ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ಡಿಎ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ವಾಸ್ತವಾಗಿ, ತಾರಾಪುರ ಪ್ರದೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಮಾರು ನೂರಾರು ಮಕ್ಕಳು ಪಕ್ಷದ ಧ್ವಜ, ಬ್ಯಾನರ್ ಹಿಡಿದು ಕ್ಯಾಪ್ ಧರಿಸಿ ಪಕ್ಷದ ಪರವಾಗಿ ಘೋಷಣೆ ಕೂಗುತ್ತಿದ್ದರು. ಈ ಬಗ್ಗೆ ಮಕ್ಕಳ ಬಳಿ ಕೇಳಿದಾಗ ಪಕ್ಷದ ಧ್ವಜ-ಬ್ಯಾನರ್ ಹಿಡಿದು, ಕ್ಯಾಪ್ ಧರಿಸಿ, ಪಕ್ಷದ ಪರ ಘೋಷಣೆ ಕೂಗುತ್ತಾ ಇವರೊಂದಿಗೆ ಸಂಚರಿಸಿದರೆ ನಮಗೆ 50-50 ರೂಪಾಯಿಗಳನ್ನು ನೀಡುವುದಾಗಿ ಹೇಳಿದ್ದಾರೆ. ಅದಕ್ಕಾಗಿ ನಾವು ಬಂದಿದ್ದೇವೆ ಎಂದಿದ್ದಾರೆ.
ನಿಮ್ಮನ್ನು ಯಾರು ಕರೆತಂದರು? ನಿಮಗೆ ಯಾರು ಹಣ ನೀಡುತ್ತಾರೆ ಎಂದು ಕೇಳಿದಾಗ ಕೆಲವರು ಶಕುನಿ ಚೌಧರಿ ಎಂದೂ ಇನ್ನೂ ಕೆಲವರು ಮೆವಲಾಲ್ ಚೌಧರಿ ಅವರು ಕರೆತಂದಿರುವುದಾಗಿ ಪ್ರತಿಕ್ರಿಯಿಸಿದ್ದಾರೆ.
ಅಮಾಯಕ ಮಕ್ಕಳನ್ನು ರಾಜಕೀಯದಲ್ಲಿ ಬಳಸಿಕೊಳ್ಳಬಾರದು. ಆದರೆ ಮತ ಬ್ಯಾಂಕ್ ರಾಜಕೀಯದ ಹಿನ್ನೆಲೆಯಲ್ಲಿ ಹಣದ ಆಕರ್ಷಣೆ ಮೂಲಕ ಮುಗ್ಧ ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದೆ.