ಬೆಂಗಳೂರು:- ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸೇರಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದರು.
ವಿಧಾನ ಪರಿಷತ್‍ನ ಪ್ರಶ್ನೋತ್ತರದಲ್ಲಿ ಸದಸ್ಯರಾದ ಸಲೀಂ ಅಹಮ್ಮದ್, ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಮಂಜೂರಾದ ನಿವೇಶನ ಅಥವಾ ಭೂಮಿಯಲ್ಲಿ ಎಷ್ಟು ಸಮಯದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಬೇಕು. ಒಂದು ವೇಳೆ ಉದ್ಯಮ ಸ್ಥಾಪನೆಯಾಗದೆ ಇದ್ದರೆ ಯಾವ ಕ್ರಮ ಕೈಗೊಳ್ಳಲಾಗುತ್ತ್ತದೆ ಎಂದು ಪ್ರಶ್ನಿಸಿದರು.
ಕೈಗಾರಿಕೆ ಇಲಾಖೆಯಿಂದ 188 ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗಿದೆ.ಅದಕ್ಕಾಗಿ 1.60 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ಅದರಲ್ಲಿ 52,008 ಎಕರೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ಉಳಿದ ಭೂಮಿಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ನಿರಾಣಿ ಹೇಳಿದರು.
ಇದನ್ನೂ ಓದಿ : 'ನಾನು ಆರೋಗ್ಯವಾಗಿದ್ದೇನೆ'; ಮುಖಂಡರು, ಕಾರ್ಯಕರ್ತರಿಗೆ ಹೆಚ್.ಡಿ.ದೇವೇಗೌಡರ ಸಂದೇಶ
ಯೋಜನೆಯ ಅಂದಾಜು ಗಾತ್ರ ಆಧರಿಸಿ ಉದ್ಯಮ ಆರಂಭಿಸಲು ಕಾಲಮಿತಿ ನಿಗದಿ ಪಡಿಸಲಾಗುತ್ತದೆ. ಉಕ್ಕು ಉದ್ಯಮಗಳಿಗೆ ಐದು ವರ್ಷಗಳವರೆಗೂ ಸಮಯ ಬೇಕಾಗುತ್ತದೆ. ಒಟ್ಟಾರೆ ಉದ್ಯಮ ಆರಂಭಕ್ಕೆ ಗರಿಷ್ಠ 10 ವರ್ಷಗಳ ಕಾಲಾವ ನೀಡಲಾಗುತ್ತದೆ. ಅದರ ಒಳಗೆ ಉದ್ಯಮ ಆರಂಭವಾಗದಿದ್ದರೆ ನೋಟಿಸ್ ನೀಡಿ ಭೂಮಿ ಹಿಂಪಡೆಯುವ ಪ್ರಕ್ರಿಯೆ ನಡೆಸಲಾಗುವುದು.
ಈವರೆಗೂ 117 ಉದ್ದಿಮೆದಾರರಿಗೆ ನೋಟಿಸ್ ನೀಡಲಾಗಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ ಇನ್ನೂ ಮುಂದೆ ಕೆವಿಯಟ್ ಹಾಕಿ ಭೂಮಿ ಹಿಂಪಡೆಯಲು ಮುಂದಿನ ಕ್ರಮ ಜರುಗಿಸಲಾಗುವುದು ಎಂದು ನಿರಾಣಿ ಉತ್ತರಿಸಿದರು.
ನವೆಂಬರ್ ಮೊದಲ ವಾರದಲ್ಲಿ ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದೆ.ವಿದೇಶ ಬಂಡವಾಳ ಹೂಡಿಕೆಯಲ್ಲಿ ನಮ್ಮ ರಾಜ್ಯ ಸತತ ನಾಲ್ಕನೆ ತ್ರೈಮಾಸಿಕದಲ್ಲೂ ಮೊದಲ ಸ್ಥಾನದಲ್ಲಿದೆ.ದೇಶದ ಹೂಡಿಕೆಯಲ್ಲಿ ಶೇ.38ರಷ್ಟು ಪಾಲನ್ನು ನಾವು ಹೊಂದಿದ್ದೇವೆ ಎಂದು ನಿರಾಣಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.