ಲಕ್ಷಾಂತರ ನೌಕರರ PF ಖಾತೆ ಬ್ಲಾಕ್, ನಿಮ್ಮ ಖಾತೆ ಕುರಿತು ಹೀಗೆ ಪತ್ತೆ ಹಚ್ಚಿ

ಕೇಂದ್ರ ಸರ್ಕಾರ ಸುಮಾರು 80,000 ಕಂಪನಿಗಳನ್ನು ಪತ್ತೆಹಚ್ಚಿದ್ದು, ಈ ಕಂಪನಿಗಳ ಸುಮಾರು 9 ಲಕ್ಷ ನೌಕರರ PF ಖಾತೆಯನ್ನು ನೌಕರರ ಭವಿಷ್ಯನಿಧಿ ಸಂಸ್ಥೆ ಬ್ಲಾಕ್ ಮಾಡಿದೆ.

Last Updated : Jan 30, 2020, 05:12 PM IST
ಲಕ್ಷಾಂತರ ನೌಕರರ PF ಖಾತೆ ಬ್ಲಾಕ್, ನಿಮ್ಮ ಖಾತೆ ಕುರಿತು ಹೀಗೆ ಪತ್ತೆ ಹಚ್ಚಿ title=

ನವದೆಹಲಿ:ಕೇಂದ್ರ ಸರ್ಕಾರ ಸುಮಾರು 80,000 ಕಂಪನಿಗಳನ್ನು ಪತ್ತೆಹಚ್ಚಿದ್ದು, ಈ ಕಂಪನಿಗಳ ಸುಮಾರು 9 ಲಕ್ಷ ನೌಕರರ PF ಖಾತೆಯನ್ನು ನೌಕರರ ಭವಿಷ್ಯನಿಧಿ ಸಂಸ್ಥೆ ಬ್ಲಾಕ್ ಮಾಡಿದೆ. ಈ ಕುರಿತು ಪತ್ರಿಕೆಯೊಂದರಲ್ಲಿ ಪ್ರಕಟವಾಗಿರುವ ಒಂದು ವರದಿಯ ಪ್ರಕಾರ ಪ್ರಧಾನ ಮಂತ್ರಿ ರೋಜ್ಗಾರ್ ಯೋಜನೆಯ ಅಡಿ ಬರುವ 9 ಲಕ್ಷ ಲಾಭಾರ್ಥಿಗಳನ್ನು, ಈ ಯೋಜನೆಗೆ ಅನರ್ಹರೆಂದು ಗುರುತಿಸಲಾಗಿದೆ. ಏಕೆಂದರೆ ಅವರು ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ ಫಾರ್ಮಲ್ ಸೆಕ್ಟರ್ ನ ಭಾಗವಾಗಿದ್ದರು ಎನ್ನಲಾಗಿದೆ. ಅಂದರೆ, ಅವರು ಈ ಯೋಜನೆ ಅನುಷ್ಠಾನಕ್ಕೆ ಬರುವ ಮುನ್ನವೇ PF ಯೋಜನೆಯ ಲಾಭ ಪಡೆಯುತ್ತಿದ್ದರು ಎಂದು ಹೇಳಿದೆ.

ವರದಿಯ ಪ್ರಕಾರ EPFO ಈ ಎಲ್ಲ 9 ಲಕ್ಷ ನೌಕರರ ಪ್ರಾವಿಡೆಂಟ್ ಫಂಡ್ ಖಾತೆಯನ್ನು ಬ್ಲಾಕ್ ಮಾಡಿದೆ. ಅಷ್ಟೇ ಅಲ್ಲ ಸಂಸ್ಥೆ ಈ 80,000 ಕಂಪನಿಗಳಿಂದ 222 ಕೋಟಿ ರೂ. ಹಣ ಹಿಂಪಡೆದಿದೆ. ಈ ಲಾಭಾರ್ಥಿಗಳ ಸಂಖ್ಯೆ EPFO ಪೆರೋಲ್ ಡೇಟಾಬೇಸ್ ನಲ್ಲಿ ಶಾಮೀಲಾಗಿತ್ತು ಹಾಗೂ ಇದನ್ನು ಸರ್ಕಾರ ಫಾರ್ಮಲ್ ಸೆಕ್ಟರ್ ನಲ್ಲಿ ನೀಡಲಾದ ಉದ್ಯೋಗಾವಕಾಶ ಎಂಬಂತೆ ಬಿಂಬಿಸುತ್ತಿತ್ತು.

ಒಂದು ವೇಳೆ ನಿಮ್ಮ PF ಖಾತೆಯೂ ಕೂಡ ಬ್ಲಾಕ್ ಆಗಿದ್ದರೆ, ನೀವು ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಿ ಅದನ್ನು ಪತ್ತೆಹಚ್ಚಬಹುದು. ಇದಕ್ಕಾಗಿ ನೀವು ನಿಮ್ಮ ಮೊಬೈಲ್ ನಲ್ಲಿ EPFO ಸಂಸ್ಥೆಯ ಅಧಿಕೃತ ಆಪ್ ಆಗಿರುವ m-EPFO ಡೌನ್ ಲೋಡ್ ಮಾಡಬೇಕು. ಬಳಿಕ ಮೆಂಬರ್ ಮೇಲೆ ಕ್ಲಿಕ್ಕಿಸಿ, ಬ್ಯಾಲೆನ್ಸ್/ಪಾಸ್ ಬುಕ್ ಮೇಲೆ ಕ್ಲಿಕ್ಕಿಸಿ. ನಂತರ UAN ನಂಬರ್ ಹಾಗೂ ಅಧಿಕೃತ ಮೊಬೈಲ್ ನಂಬರ್ ನಮೂದಿಸಿ ನಿಮ್ಮ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಿ.

ಇದನ್ನು ನೀವು SMS ಮೂಲಕ ಕೂಡ ಮಾಡಬಹುದು. SMS ಮೂಲಕ EPF ಬ್ಯಾಲೆನ್ಸ್ ತಿಳಿದುಕೊಳ್ಳಲು, ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ ನಿಂದ 77382 99899ಗೆ SMS ಮಾಡಬೇಕು. SMS ನಲ್ಲಿ EPFOOHO<ಸ್ಪೇಸ್>UAN<ಸ್ಪೇಸ್>ENG ಎಂದು ಬರೆದು ಕಳುಹಿಸಬೇಕು. ಇದರಲ್ಲಿ ENG ನೀವು ಪಡೆಯಬೇಕಾದ ಮಾಹಿತಿಯ ಭಾಷೆ ಕುರಿತು ಹೇಳುತ್ತದೆ. ಈ ಮೆಸೇಜ್ ಸೌಲಭ್ಯ ಇಂಗ್ಲಿಷ್ ಜೊತೆಗೆ ಹಿಂದಿ, ಗುಜರಾತಿ, ಕನ್ನಡ, ಮರಾಠಿ, ಪಂಜಾಬಿ, ತೆಲುಗು, ತಮಿಳು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿಯೂ ಕೂಡ ಲಭ್ಯವಿರಲಿದೆ. ಮಿಸ್ಡ್ ಕಾಲ್ ಮೂಲಕ ನಿಮ್ಮ ಖಾತೆಯ ಮಾಹಿತಿ ಪಡೆಯಲು ನಿಮ್ಮ ಮೊಬೈಲ್ ಸಂಖ್ಯೆ UAN ಸಂಖ್ಯೆಯ ಜೊತೆಗೆ ಲಿಂಕ್ ಹೊಂದಿರಬೇಕು. ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 011-22901406ಗೆ ಮಿಸ್ಡ್ ಕಾಲ್ ನೀಡುವ ಮೂಲಕ ನಿಮ್ಮ ಖಾತೆಯಲ್ಲಿನ ಬ್ಯಾಲೆನ್ಸ್ ಕುರಿತು ಮಾಹಿತಿ ಪಡೆಯಬಹುದು. ಮಿಸ್ಡ್ ಕಾಲ್ ನೀಡಿದ ಬಳಿಕ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ EPFO ಸಂಸ್ಥೆಯಿಂದ ಒಂದು ಮೆಸೇಜ್ ಬರಲಿದ್ದು, ಈ ಮೆಸೇಜ್ ನಿಮ್ಮ ಖಾತೆಯ ಮಾಹಿತಿ ಒಳಗೊಂಡಿರಲಿದೆ. ಮೆಸೇಜ್ ನಲ್ಲಿ EPFO ಖಾತೆ ಸಂಖ್ಯೆ, ನಿಮ್ಮ ಹೆಸರು, ನಿಮ್ಮ ಜನ್ಮದಿನಾಂಕ ಒಳಗೊಂಡಂತೆ ನಿಮ್ಮ ಖಾತೆಯಲ್ಲಿರುವ ಒಟ್ಟು ಹಣ ಹಾಗೂ ಕೊನೆಯದಾಗಿ ಜಮೆಯಾದ ಹಣದ ಮಾಹಿತಿ ಇರಲಿದೆ.

Trending News