ನವದೆಹಲಿ: ಹೇಗ್‌ನ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಪ್ರಕರಣದ ಸಾರ್ವಜನಿಕ ವಿಚಾರಣೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ಹಿರಿಯ ವಕೀಲ ಹರೀಶ್ ಸಾಲ್ವೆ ಶುಲ್ಕವಾಗಿ ಕೇವಲ 1 ರೂ. ಪಡೆದರೆ, ಇನ್ನೊಂದೆಡೆ ಪಾಕ್ ಪರವಾಗಿ ವಾದ ಮಾಡಿದ ವಕೀಲರು 20 ಕೋಟಿ ರೂ ಶುಲ್ಕವನ್ನು ಪಡೆದಿದ್ದಾರೆ ಎನ್ನಲಾಗಿದೆ.
ಮಾಜಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ಅವರು ಮೇ 15, 2017 ರಂದು ಟ್ವೀಟ್ ನಲ್ಲಿ ಸಾಲ್ವೆ ಹೇಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಕೇವಲ 1 ರೂಗಳನ್ನು ಪಡೆದಿದ್ದಾರೆ ಎಂದು ಹೇಳಿದ್ದರು.ಸಾಮಾನ್ಯವಾಗಿ ಹರೀಶ್ ಸಾಲ್ವೆ ಅವರು 30 ಲಕ್ಷ ರೂ ವನ್ನು ಒಂದು ದಿನದ ವಿಚಾರಣೆಗಾಗಿ ಪಡೆಯುತ್ತಾರೆ ಎನ್ನಲಾಗಿದೆ.
ಕಳೆದ ವರ್ಷ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಂಡಿಸಿದ ಪಾಕಿಸ್ತಾನ ಸರ್ಕಾರ ತನ್ನ ಬಜೆಟ್ ದಾಖಲೆಯಲ್ಲಿ ಹೇಗ್ ದೇಶವನ್ನು ಪ್ರತಿನಿಧಿಸುತ್ತಿರುವ ಯುಕೆ ಮೂಲದ ನ್ಯಾಯವಾದಿ ಖವಾರ್ ಖುರೇಷಿಗೆ 20 ಕೋಟಿ ರೂವನ್ನು ವ್ಯಯ ಮಾಡಿತ್ತು ಎನ್ನಲಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕಾನೂನು ಪದವೀಧರರಾದ ಖುರೇಷಿ ಅವರು ಐಸಿಜೆ ಪ್ರಕರಣದಲ್ಲಿ ಹೋರಾಡುತ್ತಿರುವ ಅತ್ಯಂತ ಕಿರಿಯ ವಕೀಲ ಎಂದು ಹೇಳಲಾಗಿದೆ.