ಕಾಸ್ಗಂಜ್: ಉತ್ತರಪ್ರದೇಶದ ಕಾಸ್ಗಂಜ್ ನಲ್ಲಿ ಗಣರಾಜ್ಯೋತ್ಸವದ ವೇಳೆ ನಡೆದಿದ್ದ ಗುಂಪು ಘರ್ಷಣೆ ವೇಳೆ ರಾಹುಲ್ ಉಪಾಧ್ಯಾಯ ಎಂಬಾತ ಮೃತಪಟ್ಟಿರುವ ಕುರಿತು ಘೋಷಿಸಿದ ಒಂದು ದಿನದ ತರುವಾಯ ಅ ವ್ಯಕ್ತಿಯೇ ಮಂಗಳವಾರ ಪ್ರತ್ಯಕ್ಷವಾಗಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಸ್ಗಂಜ್ ಹಿಂಸಾಚಾರದಲ್ಲಿ ನಾನು ಸಾವನ್ನಪ್ಪಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಎದ್ದಿದ್ದ ವದಂತಿಗಳ ಕುರಿತು ನನ್ನ ಗೆಳೆಯನಿಂದ ವಿಷಯ ತಿಳಿಯಿತು. ಆದರೆ, ಆ ವೇಳೆ ನಾನು ನನ್ನ ಗ್ರಾಮಕ್ಕೆ ತೆರಳಿದ್ದು, ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ರಾಹುಲ್ ಉಪಾಧ್ಯಾಯ ಬದುಕಿರುವ ಸುದ್ದಿಯನ್ನು ಐಜಿಪಿ ಸಂಜೀವ್ ಗುಪ್ತಾ ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳನ್ನು ಹಬ್ಬಿಸಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಅಂಗವಾಗಿ ನಡೆದ ತಿರಂಗ ರ್ಯಾಲಿ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿ ಎರಡೂ ಕಡೆಯಿಂದಲೂ ಗುಂಡಿನ ಚಕಮಕಿ ನಡೆದಿತ್ತು. ಆಗ ರಾಹುಲ್ ಉಪಾಧ್ಯಾಯ ಮತ್ತು ಚಂದನ್ಗುಪ್ತಾ ಎಂಬ ಇಬ್ಬರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಕಳೆದ ಮೂರು ದಿನಗಳಿಂದಲೂ ಹಿಂಸಾಚಾರ ಭುಗಿಲೆದ್ದಿತ್ತು. ಘಟನೆಯಲ್ಲಿ ಓರ್ವ ಮೃತಪಟ್ಟು ಕೆಲವರು ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಇದುವರೆಗೂ ಸುಮಾರು 112 ಜನರನ್ನು ಬಂಧಿಸಲಾಗಿದೆ.