ನವದೆಹಲಿ: ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಕಾಂಗ್ರೆಸ್ ಮಹಾಅಧಿವೇಶನದಲ್ಲಿ ಕನ್ನಡದ ಕೂಗು ಮೊಳಗಿದೆ. ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕನ್ನಡದ ದೊಡ್ಡ ಹಬ್ಬವಾದ ಯುಗಾದಿ ಹಬ್ಬಕ್ಕೆ ಕನ್ನಡದಲ್ಲಿ ಶುಭಾಶಯ ಕೋರುವ ಮೂಲಕ ದೆಹಲಿಯಲ್ಲಿ ಕನ್ನಡದ ಕಹಳೆ ಮೊಳಗಿಸಿದ್ದಾರೆ.
ನವದೆಹಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಎಐಸಿಸಿ ಮಹಾಅಧಿವೇಶನ ಆರಂಭವಾಗಿದ್ದು, ರಾಹುಲ್ ಗಾಂಧಿ ಧ್ವಜಾರೋಹಣದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಧಿವೇಶನದಲ್ಲಿ ದೇಶದ ವಿವಿಧ ರಾಜ್ಯಗಳಿಂದ ಆಗಮಿಸಿರುವ ಕಾಂಗ್ರೆಸ್ ಮುಖಂಡರು ಸೇರಿದಂತೆ 12 ಸಾವಿರ ಮಂದಿ ಭಾಗಿಯಾಗಿದ್ದಾರೆ. ಕರ್ನಾಟಕದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ರಾಜ್ಯ ಸಚಿವರು ,ಕೆಪಿಸಿಸಿ ಸದಸ್ಯರು ಭಾಗಿಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ರಾಜಕೀಯ ನಿರ್ಣಯ ಮಂಡಿಸಿದ ಮಲ್ಲಿಕಾರ್ಜುನ ಖರ್ಗೆ ಕನ್ನಡದಲ್ಲಿ ತಮ್ಮ ಮಾತನ್ನು ಪ್ರಾರಂಭಿಸಿದರು. ಯುಗಾದಿ ಕರ್ನಾಟಕದ ದೊಡ್ಡ ಹಬ್ಬ. ಆದ್ದರಿಂದ ದೇಶದ ಇತರ ಭಾಗದ ಜನರಿಗೂ ಶುಭಾಶಯ ಕೋರುತ್ತಿದ್ದೇನೆ ಎಂದು ಶುಭಾಶಯ ಕೋರಿ ನಂತರ ನಿರ್ಣಯ ಮಂಡಿಸಿದರು. ಈ ಸಂದರ್ಭದಲ್ಲಿ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎನ್ನುವವರಿಗೆ ಖರ್ಗೆ ತಿರುಗೇಟು ನೀಡಿದರು. ಅದರ ಕೆಲವು ಅಂಶಗಳು...
- ದೊಡ್ಡ ದೊಡ್ಡ ಡ್ಯಾಂಗಳು, ದೊಡ್ಡ ಕಾರ್ಖಾನೆಗಳು ದೇಶಕ್ಕೆ ನೆಹರು ನೀಡಿದ ಕೊಡುಗೆ.
- 33 ಕೋಟಿ ಜನರಿಗೆ ಉದ್ಯೋಗ, ಒದಗಿಸುವ ಕೆಲಸವನ್ನು ನೆಹರು ಮಾಡಿದ್ದಾರೆ.
- ಆಹಾರ ಸಂರಕ್ಷಣಾ ಕಾಯ್ದೆಯಿಂದ ಎಲ್ಲರಿಗೂ ಆಹಾರ ಲಭ್ಯವಾಯಿತು.
- ಇಸ್ರೊ, ಏಮ್ಸ್, ಐಐಟಿ ಕಾಂಗ್ರೆಸ್ ಕೊಡುಗೆಗಳು.
- ಕಾಂಗ್ರೆಸ್ ದೇಶವನ್ನು ಸಂರಕ್ಷಿಸಿ ಒಗ್ಗೂಡಿಸಿದೆ.
- ಕಾಂಗ್ರೆಸ್ ರೈತರ ಸಾಲ ಮನ್ನಾ ಮಾಡಿದೆ.
- ದಲಿತರ ಅಭಿವೃದ್ದಿಗೆ ಕಾಂಗ್ರೇಸ್ ಕರೆ ನೀಡಿದೆ.
- ಕರ್ನಾಟಕದಲ್ಲಿ ಕಾಂಗ್ರೆಸ್ ಅತಿ ಹೆಚ್ಚು ಅನುದಾನ ನೀಡಿದೆ.