ನವದೆಹಲಿ: ದೇಶದ ಮೊದಲ ಲೋಕಪಾಲರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಪಿನಾಕಿ ಚಂದ್ರ ಘೋಷ್ ನೇಮಕಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದು, ಪಿ.ಸಿ. ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರನ್ನಾಗಿ ನೇಮಿಸಿ ಕೇಂದ್ರ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ.
ಪಿ. ಸಿ. ಘೋಷ್ ಅವರನ್ನು ದೇಶದ ಮೊದಲ ಲೋಕಪಾಲರಾಗಿ ನೇಮಿಸುವುದರ ಜೊತೆಗೆ, ಲೋಕಪಾಲ ಸಂಸ್ಥೆಗೆ ನ್ಯಾಯಾಂಗ ಸದಸ್ಯರಾಗಿ ನ್ಯಾಯಮೂರ್ತಿಗಳಾದ ದಿಲೀಪ್ ಬಿ. ಭೋಸಲೆ, ಪ್ರದೀಪ್‌ಕುಮಾರ್ ಮೊಹಾಂತಿ, ಅಭಿಲಾಷಾಕುಮಾರಿ ಮತ್ತು ಅಜಯ್‌ಕುಮಾರ್ ತ್ರಿಪಾಠಿ ಅವರನ್ನು ನೇಮಕ ಮಾಡಲಾಗಿದೆ.
ಇದಲ್ಲದೆ ನ್ಯಾಯಾಂಗೇತರ ಸದಸ್ಯರಾಗಿ ಸಶಸ್ತ್ರ ಸೀಮಾ ದಳದ ಮಾಜಿ ಮುಖ್ಯಸ್ಥ ಅರ್ಚನಾ ರಾಮಸುಂದರಂ, ಮಹಾರಾಷ್ಟ್ರ ನಿವೃತ್ತ ಮುಖ್ಯ ಕಾರ್ಯದರ್ಶಿ ದಿನೇಶ್ ಕುಮಾರ್ ಜೈನ್, ಮಹೇಂದರ್ ಸಿಂಗ್, ಇಂದ್ರಜಿತ್ ಪ್ರಸಾದ್ ಗೌತಮ್ ಅವರನ್ನು ನೇಮಕ ಮಾಡಲಾಗಿದೆ.
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ, ಜಸ್ಟಿಸ್ ಪಿನಾಕಿ ಚಂದ್ರ ಘೋಷ್ ಅವರನ್ನು ಭಾನುವಾರ ದೇಶದ ಮೊದಲ ಲೋಕಪಾಲರಾಗಿ ಶಿಫಾರಸು ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ಪ್ರಮುಖ ಕಾನೂನು ಮಂಡಳಿಯ ಆಯ್ಕೆ ಸಮಿತಿ ಮುಕುಲ್ ರೋಹತ್ಗಿ ಅವರು ಪಿ.ಸಿ. ಘೋಷ್ ಅವರ ಹೆಸರನ್ನು ಶಿಫಾರಸು ಮಾಡಿದ್ದರು.
ಲೋಕಪಾಲ ನೇಮಕ ಕುರಿತು ಸಭೆ ಲೋಕಸಭೆ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸಲಾಗಿತ್ತು. ಆದರೆ, ವಿಶೇಷ ಆಹ್ವಾನಿತರಿಗೆ ಮತ ಹಾಕಲು ಅಥವಾ ಲೋಕಪಾಲರನ್ನು ಆಯ್ಕೆ ಮಾಡಲು ಯಾವುದೇ ಅಧಿಕಾರವಿಲ್ಲದ ಕಾರಣ ಅವರು ಸಭೆಗೆ ಗೈರುಹಾಜರಾಗಿದ್ದರು.
ಮೇ 2017 ರಲ್ಲಿ ಸುಪ್ರೀಂ ಕೋರ್ಟ್ ನಿಂದ ನಿವೃತ್ತರಾದ ಬಳಿಕ ನ್ಯಾಯಮೂರ್ತಿ ಪಿ.ಸಿ. ಘೋಷ್ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ ಎಚ್ ಆರ್ ಸಿ)ದಲ್ಲಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.