ನವದೆಹಲಿ: ಜಾರ್ಖಂಡ್ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಇಂದು ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದೆ. ಇಂದು 20 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಈ ಪೈಕಿ ಆರು ಕ್ಷೇತ್ರಗಳು ಪೂರ್ವ ಸಿಂಗ್ಬಮ್ ಜಿಲ್ಲೆಯಲ್ಲಿವೆ.
ಎರಡನೇ ಹಂತದಲ್ಲಿ ಮತದಾನಕ್ಕೆ ಸಜ್ಜಾಗಿರುವ 20 ವಿಧಾನಸಭಾ ಕ್ಷೇತ್ರಗಳಲ್ಲಿ 29 ಮಹಿಳೆಯರು ಸೇರಿದಂತೆ ಒಟ್ಟು 260 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 23,93,437 ಮಹಿಳೆಯರು ಮತ್ತು 90 ತೃತೀಯ ಲಿಂಗಿಗಳು ಸೇರಿದಂತೆ 48,25,038 ಮತದಾರರು ಅವರ ಭವಿಷ್ಯವನ್ನು ನಿರ್ಧರಿಸುತ್ತಾರೆ. ಮತದಾನಕ್ಕಾಗಿ 6,066 ಮತದಾನ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ ನಗರ ಪ್ರದೇಶಗಳಲ್ಲಿ 1,016 ಮತಗಟ್ಟೆಗಳು ಮತ್ತು ಉಳಿದವು ಗ್ರಾಮೀಣ ಪ್ರದೇಶಗಳಲ್ಲಿವೆ.
Jharkhand: People queue up to cast their votes at a polling station in Khunti during the second phase of voting for assembly elections. #JharkhandElection2019 pic.twitter.com/hKXiCLgxeI
— ANI (@ANI) December 7, 2019
ಜಿಲ್ಲಾಡಳಿತ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮತದಾನವನ್ನು ಶಾಂತಿಯುತವಾಗಿ ಮತ್ತು ನ್ಯಾಯಯುತವಾಗಿ ನಡೆಸಲು ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವದಂತಿಗಳನ್ನು ಹರಡುವವರ ಮೇಲೆ ನಿಗಾ ವಹಿಸಲು ಜಿಲ್ಲಾ ಪೊಲೀಸರು ಮಾನಿಟರಿಂಗ್ ಸೆಲ್ ರಚಿಸಿದ್ದಾರೆ. ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾನ ಶಾಂತಿಯುತವಾಗಿ ನಡೆಯುವಂತೆ ಸೂಕ್ತ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಅದಕ್ಕಾಗಿ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ 40,000 ಕ್ಕೂ ಹೆಚ್ಚು ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಹೇಳಲಾಗಿದೆ.
18 ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಮಧ್ಯಾಹ್ನ 3 ರವರೆಗೆ ಮತದಾನ ನಡೆಯಲಿದ್ದು, ಪೂರ್ವ ಜಮ್ಶೆಡ್ಪುರ ಮತ್ತು ಪಶ್ಚಿಮ ಜಮ್ಶೆಡ್ಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿವೆ. 20 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಮತ್ತು ಒಂದು ಸ್ಥಾನವನ್ನು ಪರಿಶಿಷ್ಟ ಜಾತಿ (ಎಸ್ಸಿ) ಗೆ ಕಾಯ್ದಿರಿಸಲಾಗಿದೆ.
ಇಂದು ಮತದಾನ ನಡೆಯುತ್ತಿರುವ ವಿಧಾನಸಭಾ ಸ್ಥಾನಗಳು ಬಹರಗೋರಾ, ಘಟ್ಸಿಲಾ (ST), ಪೊಟ್ಕಾ (ST), ಜುಗ್ಸಲೈ (ST), ಜಮ್ಶೆಡ್ಪುರ (ಪೂರ್ವ), ಜಮ್ಶೆಡ್ಪುರ (ಪಶ್ಚಿಮ), ಸೆರೈಕೆಲಾ (ST), ಚೈಬಾಸಾ (ST), ಮಜ್ಗಾಂವ್ (ST) , ಜಗನಾಥಪುರ (ST), ಮನೋಹರ್ಪುರ (ST), ಚಕ್ರಧರಪುರ (ST), ಖರ್ಸವಾನ್ (ST), ತಮರ್ (ST), ಟೊರ್ಪಾ (ST), ಖುಂಟಿ (ST), ಮಂದಾರ್ (ST), ಸಿಸಾಯ್ (ST), ಸಿಮ್ಡೆಗಾ (ST) ಮತ್ತು ಕೋಲೆಬಿರಾ (ST).
ಜಾರ್ಖಂಡ್ನಲ್ಲಿ ಐದು ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ನವೆಂಬರ್ 30, ಡಿಸೆಂಬರ್ 7, ಡಿಸೆಂಬರ್ 12, ಡಿಸೆಂಬರ್ 16 ಮತ್ತು ಡಿಸೆಂಬರ್ 20 ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಜಾರ್ಖಂಡ್ ವಿಧಾನಸಭಾ ಕ್ಷೇತ್ರ(Jharkhand Assembly elections) ಚುನಾವಣಾ ಫಲಿತಾಂಶಗಳನ್ನು ಡಿಸೆಂಬರ್ 23 ರಂದು ಘೋಷಿಸಲಾಗುತ್ತದೆ.