ನವದೆಹಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ವಾಯುಸೇನೆ ಮತ್ತು ಬಾಲಾಕೋಟ್ ವಾಯುದಾಳಿ ವಿಚಾರವನ್ನು ಬಿಜೆಪಿ ಅನಗತ್ಯವಾಗಿ ಪ್ರಸ್ತಾಪಿಸುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಿಸುತ್ತಿರುವ ಬೆನ್ನಲ್ಲೇ, ಡಿಡಿ ನ್ಯೂಸ್ ಮತ್ತು ರಾಜ್ಯಸಭಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವತಃ ಉತ್ತರಿಸಿದ್ದಾರೆ.
ಬಾಲಾಕೋಟ್ ವಾಯುದಾಳಿ ಮೂಲಕ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿಜೆಪಿ ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ಮಾಧ್ಯಮಗಳಲ್ಲಿ ಇರುವ ಒಂದು ವರ್ಗ ಹೈಪರ್ ಸೆಕ್ಯೂಲರ್ ಆಗಿದೆ. ಇವರು ಯಾವುದಾದರೂ ವಿಚಾರಗಳನ್ನು ಹಿಡಿದು ಸರ್ಕಾರ ಮತ್ತು ಮೋದಿ ಸುತ್ತಾ ಸುತ್ತುತ್ತಿರುತ್ತಾರೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಮೋದಿ, ಕಳೆದ 40 ವರ್ಷಗಳಿಂದ ಭಯೋತ್ಪಾದನೆ ಭಾರತೀಯರ ಮೇಲೆ ಪ್ರಭಾವ ಬೀರಿದೆ. ಈ ಬಗ್ಗೆ ಜನರಿಗೆ ತಿಳಿಸಲು ಇದು ಸರಿಯಾದ ಸಮಯ. "ನಮ್ಮ ದೃಷ್ಟಿಕೋನಗಳು ಯಾವುದರ ಮೇಲೆ ಇವೆಯೆಂದು ನಾವು ಅವರಿಗೆ ಹೇಳದಿದ್ದರೆ, ಅದರಲ್ಲಿ ತರ್ಕ ಏನು? ... ಯಾವುದೇ ದೇಶ ರಾಷ್ಟ್ರೀಯತೆಯ ಭಾವನೆ ಇಲ್ಲದೆ ಮುಂದುವರಿಯಬಹುದೇ?" ಎಂದು ಮೋದಿ ಪ್ರಶ್ನಿಸಿದರು.
"ಇಂದು ದೇಶದಲ್ಲಿ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ. ಇದು ಚುನಾವಣಾ ವಿಚಾರ ಆಗಬಾರದೇ? ರೈತರು ಸತ್ತರೆ, ಅದು ಚುನಾವಣಾ ವಿಷಯವಾಗುತ್ತದೆ. ಆದರೆ ಸೈನಿಕರು ಸಾವನ್ನಪ್ಪಿದರೆ ಅದು ಚುನಾವಣಾ ವಸ್ತು ವಿಷಯವಲ್ಲವೇ? ಅದು ಹೇಗೆ ಸಾಧ್ಯ?" ಎಂದು ಮೋದಿ ವಾಗ್ದಾಳಿ ನಡೆಸಿದರು.
ಬಾಲಾಕೋಟ್ ವೈಮಾನಿಕ ದಾಳಿ ಬಗ್ಗೆ ಮಾತನಾಡಿದ ಮೋದಿ, ಭಾರತ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ವತಃ ಗುರುತಿಸಿಕೊಂಡಿದೆ. ಈ ಹಿಂದೆ ಭಾರತ ಕೇವಲ ಪ್ರೇಕ್ಷಕನಂತಿತ್ತು. ಆದರೀಗ ತಾನೇ ಆಟಗಾರನಾಗಿದೆ. ಈ ಹಿಂದೆ ವಿಶ್ವವು ಬೈಪೋಲಾರ್ ಆಗಿತ್ತು. ಆದರೀಗ ಭಾರತದೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದು, ಭಾರತ ಎಂದಿಗೂ ಪ್ರತ್ಯೇಕ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.