ಭಾರತದಲ್ಲಿ ಮೊದಲ ಐಶಾರಾಮಿ ಕ್ರೂಸ್ ಹಡಗು ಸೇವೆ ಆರಂಭ; ಸಮುದ್ರದ ಮಧ್ಯದಲ್ಲೇ ಅನುಭವಿಸಿ ಸ್ವಿಮಿಂಗ್ ಪೂಲ್, ಸ್ಪಾ, ಶಾಪಿಂಗ್ ಮಜಾ!

ಜಲೇಶ್ ಕ್ರೂಸ್ ಟರ್ಮಿನಲ್ ನ ಅಂತಾರಾಷ್ಟ್ರೀಯ ಖ್ಯಾತಿ ಪಡೆದ 'ಕರ್ನಿಕಾ' ಕ್ರೂಸ್ ಹಡಗು ಹದಿನಾಲ್ಕು ಅಂತಸ್ತುಗಳ  ಕ್ರೂಸ್ ಆಗಿದ್ದು, ಬರೋಬ್ಬರಿ 2,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.

Last Updated : Apr 18, 2019, 05:31 PM IST
ಭಾರತದಲ್ಲಿ ಮೊದಲ ಐಶಾರಾಮಿ ಕ್ರೂಸ್ ಹಡಗು ಸೇವೆ ಆರಂಭ; ಸಮುದ್ರದ ಮಧ್ಯದಲ್ಲೇ ಅನುಭವಿಸಿ ಸ್ವಿಮಿಂಗ್ ಪೂಲ್, ಸ್ಪಾ, ಶಾಪಿಂಗ್ ಮಜಾ!  title=

ಮುಂಬೈ: ಭಾರತದ ಮೊದಲ ಭವ್ಯವಾದ, ಸಮುದ್ರದಲ್ಲಿ ತೇಲುವ ದ್ವೀಪದಂತಿರುವ, ವಿಶ್ವದರ್ಜೆಯ ಐಶಾರಾಮಿ ಕ್ರೂಸ್ ಹಡಗು 'ಕರ್ನಿಕಾ' ಇಂದಿನಿಂದ ಮುಂಬೈನಲ್ಲಿ ತನ್ನ ಸೇವೆ ಆರಂಭಿಸಿದೆ. ಜಲೇಶ್ ಕ್ರೂಸ್ ಟರ್ಮಿನಲ್ ನ ಅಂತಾರಾಷ್ಟ್ರೀಯ ಖ್ಯಾತಿ ಪಡೆದ 'ಕರ್ನಿಕಾ' ಕ್ರೂಸ್ ಹಡಗು ಹದಿನಾಲ್ಕು ಅಂತಸ್ತುಗಳ  ಕ್ರೂಸ್ ಆಗಿದ್ದು, ಬರೋಬ್ಬರಿ 2,700 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. 250 ಮೀಟರ್ ಉದ್ದವಿರುವ ಈ ಕ್ರೂಸ್, ಸಮುದ್ರದ ಮೇಲೆ ತೇಲುತ್ತಿದ್ದರೆ 7-ಸ್ಟಾರ್ ಹೋಟೆಲ್ಗಿಂತ ಅದ್ಭುತವಾಗಿ ಕಾಣುತ್ತದೆ. 

ಗೋವಾದ ಕ್ರೂಸ್ ಟರ್ಮಿನಲ್ನಲ್ಲಿರುವ ಜಲೇಶ್ ಕ್ರೂಸ್ ಟರ್ಮಿನಲ್ ನ ವೈಭವವನ್ನು ನೋಡುವಾಗ, ವಿಶಿಷ್ಟ ಅನುಭವವಾಗುತ್ತದೆ. ಭಾರತದ ಮೊದಲ ಖ್ಯಾತಿವೆತ್ತ ಹಡಗು ಕರ್ನಿಕಾ ಕ್ರೂಸ್ ಮುಂಬೈನಿಂದ ಗೋವಾಗೆ ತನ್ನ ಮೊದಲ ಸಂಚಾರ ನಡೆಸಿದೆ. ಮುಂಬೈ ಕರಾವಳಿ ತೀರದಲ್ಲಿ ಬುಧವಾರ ಸಂಜೆ ಹೊರಟ ಈ ಕ್ರೂಸ್ ಗುರುವಾರ ಬೆಳಿಗ್ಗೆ ಗೋವಾ ತಲುಪಿದೆ. ಭಾರತಕ್ಕೆ ಆದಾಯವನ್ನು ಹೆಚ್ಚಿಸುವ ಪ್ರಮುಖ ಮೂಲವಾದ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಈ ಕ್ರೂಸ್ ಅನುಕೂಲವಾಗಲಿದೆ. 

ಪ್ರವಾಸಿಗರ ಮುಖದಲ್ಲಿ ಸಂತಸ
ಕ್ರೂಸ್ ನಲ್ಲಿ ಮುಂಬೈನಿಂದ ಗೊವಾವರೆಗೆ ಪ್ರಯಾಣಿಸಿದ ಎಲ್ಲ ಪ್ರವಾಸಿಗರೂ 'ಕರ್ನಿಕಾ' ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕ್ರೂಸ್ ನಲ್ಲಿನ ಎಲ್ಲಾ ಕಾರ್ಯಕ್ರಮಗಳೂ ವಿಶೇಷವಾಗಿದ್ದು, ಬಹಳ ಚೆನ್ನಾಗಿವೆ. ಸಿಬ್ಬಂದಿಗಳೂ ಸಹ ಪ್ರವಾಸಿಸ್ನೇಹಿಗಳಾಗಿದ್ದಾರೆ ಎಂದಿದ್ದಾರೆ. ಕ್ರೂಸ್ ನಲ್ಲಿ ತನ್ನ ಹುಟ್ಟುಹಬ್ಬವನ್ನು ಆಚರಿಸಿದ ಅನಿತಾ ಮಾಲಿ ಮಾತನಾಡಿ, ಜನ್ಮದಿನವನ್ನು ಇಲ್ಲಿ ಆಚರಿಸಿದ್ದು  ಬಹಳ ಸಂತೋಷ ತಂದಿದೆ ಎಂದಿದ್ದಾರೆ. ಮತ್ತೋರ್ವ ಪ್ರಯಾಣಿಕ ದೀಪಕ್ ಮಾತನಾಡಿ, ಈ ಕ್ರೂಸ್ ನ ಮುಖ್ಯವಾದ ಅಂಶವೆಂದರೆ ಇಲ್ಲಿ ಪ್ರತಿ ವರ್ಗಕ್ಕೂ ವಿಶೇಷವಾದ ಮತ್ತು ವಿಭಿನ್ನವಾದ ಸೌಲಭ್ಯ ಹಾಗೂ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದಿದ್ದಾರೆ.

ಸ್ವಿಮ್ಮಿಂಗ್ ಪೂಲ್, ಕಾಫಿ ಶಾಪ್ ಮತ್ತು ಶಾಪಿಂಗ್ ಆನಂದಿಸಬಹುದು
ಹದಿನಾಲ್ಕು ಅಂತಸ್ತಿನ ಹಡಗನ್ನು ಪ್ರವೇಶಿಸಿದ ಕೂಡಲೇ ಇಡೀ ವಿಶ್ವದ ಸೌಂದರ್ಯವೇ ಕಣ್ಮುಂದೆ ನಿಂತಂತಾಗುತ್ತದೆ.  ಈ ಕ್ರೂಸ್ ಶಿಪ್ ನಲ್ಲಿ ಶಾಪಿಂಗ್ ಅನುಕೂಲಕ್ಕಾಗಿ ಒಂದು ದೊಡ್ಡ ಶಾಪಿಂಗ್ ಸೆಂಟರ್ ಇದೆ. ಅತ್ಯಂತ ಆಕರ್ಷಕ ರೆಸ್ಟೋರೆಂಟ್ನಲ್ಲಿ, ಪ್ರಪಂಚದ ಹಲವು ಬಗೆಯ ಭೋಜನ ಭಕ್ಷ್ಯಗಳು ದೊರೆಯಲಿವೆ. 24 ಗಂಟೆಗಳ ಕಾಫಿ ಶಾಪ್, ಕ್ರೂಸ್ ಈಜುಕೊಳ, ಆತ್ಯಾಧುನಿಕ ಕೊಠಡಿಗಳೊಂದಿಗೆ ಮನರಂಜನಾ ವಿಭಾಗಗಳೂ ಇವೆ. ಕ್ರೂಸ್ ಅನ್ನು ಸುಂದರವಾದ ಪೇಂಟಿಂಗ್ ಹಾಗೂ ಛಾಯಾಚಿತ್ರಗಳಿಂದ ಅಲಂಕರಿಸಲಾಗಿದೆ. ಅಷ್ಟೇ ಅಲ್ಲದೆ, ಯುವಕರಿಗೆ ಮತ್ತು ಮಕ್ಕಳಿಗಾಗಿ ವಿಶೇಷ ಮನರಂಜನಾ ವಿಭಾಗಗಳನ್ನೂ ತೆರೆಯಲಾಗಿದೆ. ಜೊತೆಗೆ ವಾಟರ್ ಪಾರ್ಕ್ ಸೌಲಭ್ಯ ಸಹಾ ಈ ಕ್ರೂಸ್ ನಲ್ಲಿದೆ. 

ಸಮುದ್ರದ ವಿಹಂಗಮ ನೋಟ
ಈ ಕ್ರೂಸ್ ನಲ್ಲಿ ಪ್ರಯಾಣಿಸುವಾಗ ಪ್ರವಾಸಿಗರು ತಮ್ಮ ಕೊಠಡಿಯಿಂದಲೇ ಸಮುದ್ರದ ವಿಹಂಗಮ ನೋಟ ಸವಿಯಲು ಬೃಹತ್ ಕಿಟಕಿಗಳನ್ನು ಅಳವಡಿಸಲಾಗಿದೆ. ಅಲಂಕೃತ ಕೊಠಡಿಗಳಲ್ಲಿನ ವಿಶೇಷ ಕಿಟಕಿಗಳು ಪ್ರಯಾಣಿಕರನ್ನು ಸಮುದ್ರದೆಡೆಗೆ ಆಕರ್ಷಿಸುವುದಲ್ಲದೆ, ಬಾಲ್ಕನಿಯಲ್ಲಿ ಕುಳಿತು ವಿಶೇಷ ಅನುಭವ ಪಡೆಯಬಹುದು. 

ಭಾರತದಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿ
ಈ ಕ್ರೂಸ್ ಆರಂಭವಾದ ಕೆಲವೇ ದಿನಗಳಲ್ಲಿ ದೇಶದಲ್ಲಿ ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ಧಿಯಾಗಲಿದೆ ಎಂದು ಟೂರ್ಸ್ ಅಂಡ್ ಟ್ರಾವೆಲ್ ಇಂಡಸ್ಟ್ರಿ ಉದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ವಿದೇಶಕ್ಕೆ ತೆರಳಿ ಕ್ರೂಸ್ ಅನುಭವ ಪಡೆಯುತ್ತಿದ್ದ ಪ್ರವಾಸಿಗರು ಇನ್ಮುಂದೆ ಭಾರತದಲ್ಲಿಯೇ ಈ ಆಹ್ಲಾದಕರ ಅನುಭವ ಪಡೆಯಲಿದ್ದಾರೆ. ಈ ಕ್ರೂಸ್ ನ ಒಳಾಂಗಣ ವಿನ್ಯಾಸ ಮತ್ತು ಪೇಂಟಿಂಗ್ ನೋಡಿಯೇ ಜನರು ಹೆಚ್ಚು ಆಕರ್ಷಿತರಾಗುತ್ತಾರೆ ಎಂದು ಟೂರ್ ಆಯೋಜಕ ದಿಗ್ವಿಜಯ ತ್ರಿಪಾಠಿ ಹೇಳಿದ್ದಾರೆ.

ಪ್ರಸ್ತುತ, ಈ ಕ್ರೂಸ್ ಸೇವೆಯು ಮುಂಬೈ ಮತ್ತು ಗೋವಾ ನಡುವೆ ಆರಂಭವಾಗಿದ್ದು, ಶೀಘ್ರದಲ್ಲೇ ಮುಂಬೈ, ಚೆನ್ನೈ, ವಿಶಾಖಪಟ್ಟಣ ಮಾರ್ಗಗಳಲ್ಲಿ ಸೇವೆ ಆರಂಭಿಸಲಿದೆ. ಮುಂಬರುವ ದಿನಗಳಲ್ಲಿ ಕಾರ್ನಿಕ್ ಕ್ರೂಸ್ ಶಿಪ್ ದೇಶ-ವಿದೇಶಿ ಪ್ರವಾಸಿಗರಿಗೆ  ಸಿಂಗಪುರ್, ದುಬೈ ಮತ್ತು ಗಲ್ಫ್ ರಾಷ್ಟ್ರಗಳಂತಹ ಆಕರ್ಷಕ ನಗರಗಳಿಗೂ ಸೇವೆ ವಿಸ್ತರಿಸುವ ಸಾಧ್ಯತೆಯಿದೆ. 
 

Trending News