Indian Judicial System: ಹಿಂದುತ್ವವಾದಿಗಳ ಹಿಡಿತದಲ್ಲಿದ್ದ ಭಾರತ ದೇಶದಲ್ಲಿ ಮತ್ತೆ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾರ್ಯಾಂಗ, ಶಾಸಕಾಂಗ ಮೀಡಿಯಾಂಗಗಳ ಮೇಲೆ ಜನತೆ ವಿಶ್ವಾಸ ಕಳೆದುಕೊಂಡು ನ್ಯಾಯಾಂಗದ ಮೇಲೆ ಭರವಸೆಯನ್ನು ಇಟ್ಟುಕೊಂಡಿದ್ದರು. ಆದರೆ ಮೋದಿಯಾಡಳಿತದ ಹತ್ತು ವರ್ಷಗಳಲ್ಲಿ ಸುಪ್ರೀಂಕೋರ್ಟ್ ತೆಗೆದುಕೊಂಡ ಕೆಲವು ನಿರ್ಧಾರಗಳು ಪ್ರಭುತ್ವದ ಪರವಾಗಿಯೇ ಇದ್ದವು. ಕೆಲವಾರು ನ್ಯಾಯಾಧೀಶರುಗಳು ಪ್ರಭುತ್ವದ ಫಲಾನುಭವಿಗಳೂ ಆದರು. ಇವೆಲ್ಲ ಬೆಳವಣಿಗೆಗಳಿಂದ ಸಂಘಪರಿವಾರಿಗರನ್ನು ಹೊರತುಪಡಿಸಿ ಬಹುತೇಕ ದೇಶವಾಸಿಗಳು ನ್ಯಾಯಾಂಗದ ವಿಶ್ವಾಸಾರ್ಹತೆಯನ್ನು ಅನುಮಾನಿಸತೊಡಗಿದ್ದರು.
ಆದರೆ.. ಚುನಾವಣಾ ಬಾಂಡ್ ಹಗರಣ ಕುರಿತಾಗಿ ಬಂದ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತೆ ನ್ಯಾಯಾಂಗದ ಬಗ್ಗೆ ಭರವಸೆ ಹುಟ್ಟಿಸಿತ್ತು. 2024ರ ಲೋಕಸಭಾ ಚುನಾವಣೆಯ ನಂತರ ಮೋದಿ ಏಕಾಧಿಪತ್ಯಕ್ಕೆ ಧಕ್ಕೆ ಬಂದ ನಂತರ ಬಂದ ಸುಪ್ರೀಂಕೋರ್ಟ್ ತೀರ್ಪುಗಳು ಪ್ರಜಾಪ್ರಭುತ್ವದ ಪರವಾಗಿರುವವರಿಗೆ ಭರವಸೆಯನ್ನು ಹುಟ್ಟಿಸುವಂತಿವೆ.
ಜೈಲೊಳಗೆ ಜಾತಿಯಾಧಾರಿತ ತಾರತಮ್ಯಕ್ಕೆ ಸುಪ್ರೀಂಕೋರ್ಟ್ ತಡೆಯೊಡ್ಡಿದ ನಿರ್ಧಾರ, ಚುನಾವಣಾ ಬಾಂಡ್ ಯೋಜನೆ ರದ್ದುಪಡಿಸಿ ತೀರ್ಪನ್ನು ಪ್ರಶ್ನಿಸುವ ಮರುಪರಿಶೀಲನಾ ಅರ್ಜಿಗೆ ನಕಾರ, ಸಾರ್ವಜನಿಕ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕಟ್ಟಲಾದ ದೇಗುಲ, ದರ್ಗಾ & ಪ್ರಾರ್ಥನಾ ಸ್ಥಳಗಳನ್ನು ತೆರುವುಗೊಳಿಸಬೇಕೆಂಬ ತೀರ್ಪು, ಧರ್ಮಾಧಾರಿತವಾಗಿ ಬುಲ್ಡೋಜರ್ ಮೂಲಕ ಮನೆ ನಾಶಮಾಡುವ ಯೋಗಿ ಸರ್ಕಾರದ ಕ್ರಮಕ್ಕೆ ತಡೆ... ಹೀಗೆ ಮುಂತಾದ ಐತಿಹಾಸಿಕ ತೀರ್ಪುಗಳು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸುವಂತಿವೆ.
ಅಕ್ಟೋಬರ್ 4ರಂದು "ಭಾರತ ಪ್ರಜಾಪ್ರಭುತ್ವ ರಾಷ್ಟ್ರ. ಸರ್ಕಾರವನ್ನು ಟೀಕಿಸಿದ್ದಕ್ಕಾಗಿ ಪತ್ರಕರ್ತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗದು" ಎಂದು ಸುಪ್ರೀಂಕೋರ್ಟ್ ಹೇಳಿರುವುದು ನಿರ್ಬೀತ ಪತ್ರಿಕೋದ್ಯಮಕ್ಕೆ ಆಶಾಕಿರಣವಾಗಿದೆ. ಕಳೆದು ಹತ್ತು ವರ್ಷಗಳಿಂದ ಕೇಂದ್ರ ಸರ್ಕಾರ ಪತ್ರಿಕಾ ಪ್ರತಿರೋಧವನ್ನು ದಮನ ಮಾಡುತ್ತಾ ತನ್ನ ಮಡಿಲ ಮಾಧ್ಯಮಗಳನ್ನು ಸಾಕಿ ಸಲಹುತ್ತಾ ಬಂದಿದೆ. ಬಿಜೆಪಿ ಸರ್ಕಾರ ಇರುವ ಉತ್ತರಪ್ರದೇಶದಲ್ಲಂತೂ ಸರ್ಕಾರದ ವಿರುದ್ದ ಬರೆಯುವ ಪತ್ರಕರ್ತರ ಮೇಲೆ ವಿನಾಕಾರಣ ಕೇಸ್ಗಳನ್ನು ದಾಖಲಿಸಿ ಹಿಂಸಿಸಲಾಗುತ್ತಿದೆ. ಅದಕ್ಕೊಂದು ಉದಾಹರಣೆ ಇಲ್ಲಿದೆ.
ಇದನ್ನೂ ಓದಿ: ನದಿಯಲ್ಲಿ ಉದ್ಭವಿಸಿದ ಭಜರಂಗಿ..! ರಾಮಧೂತನ ಮೂರ್ತಿ ಕಂಡು ಬೆಚ್ಚಿ ಬಿತ್ತು ಗ್ರಾಮ.. ವಿಡಿಯೋ ವೈರಲ್
"ಉತ್ತರ ಪ್ರದೇಶದಲ್ಲಿ ಪ್ರಮುಖ ಹುದ್ದೆಗಳಿಗೆ ನಿರ್ದಿಷ್ಟ ಜಾತಿಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ" ಎಂದು ಅಭಿಷೇಕ ಉಪಾದ್ಯಾಯ ಎನ್ನುವ ಪತ್ರಕರ್ತ ತನ್ನ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿ ಸರ್ಕಾರದ ಸ್ವಜಾತಿ ಪ್ರೀತಿಯನ್ನು ಟೀಕಿಸಿದ್ದ. ಮೇಲ್ಜಾತಿಯ ಅಧಿಕಾರಿಗಳನ್ನು ನೇಮಕ ಮಾಡಿಲ್ಲದೇ ಇದ್ದರೆ ಸರ್ಕಾರ ಸ್ಪಷ್ಟೀಕರಣ ಕೊಡಬಹುದಾಗಿತ್ತು, ಮಾಡಿದ್ದರೆ ತೆಪ್ಪಗಿರಬೇಕಿತ್ತು. ಅದೆಲ್ಲಾ ಬಿಟ್ಟು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲಿಸಿ FIR ಮಾಡಿಸಿ ತನೆಖೆಯ ಹೆಸರಲ್ಲಿ ಹಿಂಸಿಸಲಾಯ್ತು.
ಇಂತಹ ಸಂದರ್ಭದಲ್ಲಿ ಪತ್ರಕರ್ತನಾದವನು ಕ್ಷಮಾಪಣೆ ಪತ್ರ ಬರೆದುಕೊಡುತ್ತಾನೆ, ಇಲ್ಲವೇ ಹಿಂಸೆಗೆ ಹೆದರಿ ಪ್ರಭುತ್ವದ ವಿರುದ್ಧ ಬರೆಯುವುದನ್ನು ನಿಲ್ಲಿಸುತ್ತಾನೆ ಎಂಬುದು ಸರ್ಕಾರದ ಲೆಕ್ಕಾಚಾರವಾಗಿತ್ತು. ಆದರೆ ತನ್ನ ಮೇಲೆ ದುರುದ್ದೇಶಪೂರ್ವಕವಾಗಿ ದಾಖಲಾದ ದೂರನ್ನು ಕೈಬಿಡಬೇಕೆಂದು ಅಭಿಷೇಕ್ ಸುಪ್ರೀಂಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿ ಸರ್ಕಾರಿ ದಮನದ ಕುರಿತು ಕೋರ್ಟಿನ ಗಮನಕ್ಕೆ ತಂದ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಿಷಿಕೇಶ್ ರಾಯ್ ಹಾಗೂ ಎಸ್.ವಿ.ಎನ್ ಭಟ್ವಿಯವರನ್ನು ಒಳಗೊಂಡ ನ್ಯಾಯಪೀಠವು ಯೋಗಿ ಸರ್ಕಾರಕ್ಕೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ಕೊಟ್ಟಿತು.
"ಈ ದೇಶದಲ್ಲಿ ಪ್ರತಿಯೊಬ್ಬರ ಅಭಿಪ್ರಾಯಕ್ಕೂ ಗೌರವವಿದೆ. ಪತ್ರಕರ್ತರ ಹಕ್ಕುಗಳನ್ನು ಸಂವಿಧಾನದ 19 (1)ನೇ ವಿಧಿಯು ರಕ್ಷಿಸುತ್ತದೆ. ಸರ್ಕಾರವನ್ನು ಟೀಕಿಸಿದರು ಎಂದ ಮಾತ್ರಕ್ಕೆ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತಿಲ್ಲ" ಎಂದು ಉತ್ತರ ಪ್ರದೇಶದ ಪೋಲಿಸರಿಗೂ ಹಾಗೂ ಸರ್ಕಾರಕ್ಕೂ ಸುಪ್ರೀಂಕೋರ್ಟ್ ಪೀಠ ಎಚ್ಚರಿಕೆಯನ್ನು ಕೊಟ್ಟಿತು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು.
ಸುಪ್ರೀಂಕೋರ್ಟ್ ನ್ಯಾಯಪೀಠ ಹೇಳಿದ ಐತಿಹಾಸಿಕ ಎನ್ನುವಂತಹ ಈ ಮಾತುಗಳು ಸರ್ವಾಧಿಕಾರಿ ಮನೋಭಾವದ ಸರ್ಕಾರಗಳಿಗೆ ಹಾಗೂ ಅಂತಹ ಸರ್ಕಾರಗಳ ಕಾಲಾಳುಗಳಾಗಿ ಕೆಲಸ ಮಾಡುವ ಪೊಲೀಸ್ ವ್ಯವಸ್ಥೆಗೆ ಎಚ್ಚರಿಕೆಯಾಗಿದೆ. ಪ್ರತಿರೋಧ ತೋರಿದವರನ್ನೆಲ್ಲಾ ಕಾನೂನು ಸಂಕೋಲೆಯಲ್ಲಿ ಸಿಕ್ಕಿಸಿ ಹಿಂಸಿಸಲು ಇದು ಸರ್ವಾಧಿಕಾರಿ ವ್ಯವಸ್ಥೆಯಲ್ಲಾ ಪ್ರಜಾಪ್ರಭುತ್ವ ಎನ್ನುವುದನ್ನು ಸುಪ್ರೀಂಕೋರ್ಟು ಆಗಾಗ ನೆನಪಿಸುತ್ತಲೇ ಇರಬೇಕಾಗುತ್ತದೆ. ಇಲ್ಲದೇ ಹೋದರೆ ಸರ್ವಾಧಿಕಾರಿ ಸರ್ಕಾರದ ಅಂಗಗಳ ಆಳ್ವಿಕೆಯಲ್ಲಿ ಸ್ವತಂತ್ರ ಪತ್ರಕರ್ತರು ಅನೇಕ ಬಗೆಯ ಹಿಂಸೆ ದಮನಗಳಿಗೆ ಒಳಗಾಗಬೇಕಾಗುತ್ತದೆ. ಪರ್ತಕರ್ತರಿಗೂ ಸಹ ನ್ಯಾಯಾಲಯದ ಜನತಂತ್ರ ಪರವಾದ ನಿಲುವುಗಳೇ ಶ್ರೀರಕ್ಷೆಯಾಗಿವೆ.
ಅತ್ಯುನ್ನತ ನ್ಯಾಯಾಲಯಗಳಿಂದ ಜನತಂತ್ರದ ಪರವಾಗಿ, ನ್ಯಾಯದ ಪರವಾಗಿ ತೀರ್ಪುಗಳು ಬರುತ್ತಿರುವುದು ಸಮಾಧಾನಕರವಾಗಿದೆ. ಆದರೆ ಮತ್ತೆ ಅಲ್ಲಲ್ಲಿ ಕೆಲವು ನ್ಯಾಯಾಧೀಶರು ಪ್ರಜಾಪ್ರಭುತ್ವಕ್ಕೆ ಮಾರಕವಾಗುವಂತಹ ಹೇಳಿಕೆ ತೀರ್ಪುಗಳನ್ನು ಕೊಡುತ್ತಿರುವುದು ಆತಂಕಕಾರಿಯಾಗಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ರವಿಕುಮಾರ ದಿವಾಕರ್ ಎನ್ನುವ ಜಿಲ್ಲಾ ನ್ಯಾಯಾಧೀಶರೊಬ್ಬರು ಮತಾಂಧ ನಿರ್ಧಾರ ಪ್ರಕಟಿಸಿದ್ದಾರೆ. ಅತ್ಯಾಚಾರದ ಆರೋಪಿತ ಮುಸ್ಲಿಂ ಯುವಕನಿಗೆ ಶಿಕ್ಷೆ ಪ್ರಕಟಿಸುವಾಗ "ಮುಸ್ಲಿಂ ಪುರುಷರು ಹಿಂದೂ ಮಹಿಳೆಯರನ್ನು ವಿವಾಹವಾಗುವ ಮೂಲಕ ಇಸ್ಲಾಂಗೆ ಮತಾಂತರ ಮಾಡುತ್ತಿದ್ದಾರೆ. ಇದೇ ಇವರ ʼಲವ್ ಜಿಹಾದ್ʼನ ಮುಖ್ಯ ಉದ್ದೇಶ. ನಿರ್ದಿಷ್ಟ ಧರ್ಮದ ಅರಾಜಕತಾವಾದಿಗಳು ಅಂತಾರಾಷ್ಟ್ರೀಯ ಸಂಚು ಮತ್ತು ಜನಾಂಗೀಯ ಯುದ್ದದ ಮೂಲಕ ಭಾರತದ ಮೇಲೆ ಪ್ರಭುತ್ವ ಸಾರುವುದೇ ಆಗಿದೆ." ಎಂದು ಓಪನ್ ಕೋರ್ಟಲ್ಲಿ ತಮ್ಮ ವ್ಯಕ್ತಿಗತ ಕೋಮು ನಿಲುವನ್ನು ಈ ನ್ಯಾಯಮೂರ್ತಿಗಳು ಬಹಿರಂಗಪಡಿಸಿದರು.
"ಸಮರ್ಪಣೆ ಮತ್ತು ತ್ಯಾಗದಿಂದ ಅಧಿಕಾರ ನಡೆಸುತ್ತಿರುವ ಧಾರ್ಮಿಕ ವ್ಯಕ್ತಿಗೆ ಪರಿಪೂರ್ಣ ಉದಾಹರಣೆ ಎಂದರೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಂದು ಶ್ಲಾಘಿಸಿದ್ದ ಇದೇ ನ್ಯಾಯಮೂರ್ತಿಯಿಂದ ಇದೇ ರೀತಿಯ ತೀರ್ಪು ಬರಲು ಸಾಧ್ಯ. ಜ್ಞಾನವಾಪಿ-ಕಾಶಿ ವಿಶ್ವನಾಥ ಪ್ರಕರಣದಲ್ಲಿ ಆದೇಶ ನೀಡಿದ ನಂತರ ತನಗೆ ಬೆದರಿಕೆ ಇದೆ ಎಂದು ಅಲಾಹಾಬಾದ್ ಹೈಕೋರ್ಟ್ಗೆ ತಿಳಿಸುವ ಮೂಲಕವೂ ನ್ಯಾಯಾಧೀಶ ದಿವಾಕರ್ ಸುದ್ದಿಯಲ್ಲಿದ್ದರು.
ಇಸ್ಲಾಮೊಫೋಬಿಯಾ ರೋಗ ಪೀಡಿತ ಹಿಂದುತ್ವವಾದಿ ಪ್ರತಿಪಾದಕರಾದ ಇಂತಹ ನ್ಯಾಯಮೂರ್ತಿಗಳಿಂದಲೇ ನ್ಯಾಯಾಂಗದ ಮೇಲಿನ ವಿಶ್ವಾಸಾರ್ಹತೆ ಆಗಾಗ ಪ್ರಶ್ನಾರ್ಹವಾಗುತ್ತದೆ. ಮತಾಂಧತೆಯನ್ನು ಪ್ರಚೋದಿಸುವಂತಹ ನ್ಯಾಯಮೂರ್ತಿಗಳ ಹೇಳಿಕೆ ಮತ್ತು ತೀರ್ಪುಗಳು ದೇಶದ ಸೌಹಾರ್ಧತೆಯನ್ನು ಕದಡಲು ಪ್ರೇರೇಪಿಸುತ್ತವೆ. ಹಿಂದುತ್ವವಾದಿ ಮತಾಂಧರ ಕೈ ಬಾಯಿಗಳಿಗೆ ಅಸ್ತ್ರವನ್ನು ವದಗಿಸುತ್ತವೆ. ಹಾಗೂ ಅನ್ಯ ಧರ್ಮೀಯರಲ್ಲಿ ಅಸಹನೆಯನ್ನುಂಟು ಮಾಡುತ್ತವೆ. ಇವೇ ಮುಂದೆ ಕೋಮುಸಂಘರ್ಷಗಳಿಗೆ ಕಾರಣವಾಗುತ್ತವೆ. ಕೋಮು ಸೌಹಾರ್ಧತೆಯನ್ನು ಕಾಪಾಡಬೇಕಾದ ನ್ಯಾಯಾಧೀಶರೇ ಹೀಗೆ ಕೋಮುಪ್ರಚೋದನೆ ಹೇಳಿಕೆ ಕೊಟ್ಟರೆ ವಿನಾಶವಲ್ಲದೆ ಬೇರೇನು ಸಾಧ್ಯ.
ಸುಪ್ರೀಂಕೋರ್ಟ್ ಮೊದಲು ತನ್ನ ಎಲ್ಲಾ ಆಧೀನ ನ್ಯಾಯಾಲಯದ ನ್ಯಾಯಮೂರ್ತಿಗಳಿಗೆ ಆದೇಶ ಹೊರಡಿಸಬೇಕಿದೆ. ಸಂವಿಧಾನಕ್ಕೆ ವ್ಯತಿರಿಕ್ತವಾದ ಹೇಳಿಕೆ ನೀಡುವ ಹಾಗೂ ತೀರ್ಪುಗಳನ್ನು ಕೊಡುವ ನ್ಯಾಯಮೂರ್ತಿಗಳ ಕಿವಿ ಹಿಂಡಿ ಭಾರತದ ಜ್ಯಾತ್ಯಾತೀತತೆ ಹಾಗೂ ಧರ್ಮ ನಿರಪೇಕ್ಷತೆಯ ಬಗ್ಗೆ ಪಾಠ ಮಾಡಬೇಕಿದೆ. ಹಾಗೆ ಮಾಡದೇ ಇದ್ದಲ್ಲಿ ಕೆಲವು ಮತಾಂಧ ನ್ಯಾಯಾಧೀಶರು ಕೊಡುವ ತೀರ್ಪುಗಳಿಂದಾಗಿ ನ್ಯಾಯಾಂಗ ವ್ಯವಸ್ಥೆಯೇ ಅನುಮಾನಕ್ಕೆ ಒಳಗಾಗುವಂತಾಗುತ್ತದೆ. ನ್ಯಾಯಾಂಗದ ಮೇಲೆ ಈ ದೇಶವಾಸಿಗಳು ಭರವಸೆ ಕಳೆದುಕೊಳ್ಳದಂತೆ ಮಾಡುವ ಮಹತ್ತರವಾದ ಹೊಣೆಗಾರಿಕೆ ಸುಪ್ರೀಂಕೋರ್ಟಿನದ್ದಾಗಿದೆ. ಸಂವಿಧಾನ ಹಾಕಿಕೊಟ್ಟ ಚೌಕಟ್ಟಿನ ಒಳಗೆ ನ್ಯಾಯಾಂಗ ಕಾರ್ಯನಿರ್ವಹಿಸುವಂತಾಗಬೇಕಿದೆ.
* ಶಶಿಕಾಂತ ಯಡಹಳ್ಳಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.