ನವದೆಹಲಿ: 84 ದಿನಗಳಲ್ಲಿ 7 ಹಂತಗಳಲ್ಲಿ ನಡೆದ ಲೋಕಸಭಾ ಚುನಾವಣೆ 2019, ಮೇ 19(ಭಾನುವಾರ) ಅಂತಿಮ ಹಂತದ ಮತದಾನದೊಂದಿಗೆ ಕೊನೆಗೊಂಡಿದೆ. ಈ ಚುನಾವಣೆಯಲ್ಲಿ 543 ಲೋಕಸಭಾ ಕ್ಷೇತ್ರಗಳಲ್ಲಿ 542 ಕ್ಷೇತ್ರಗಳ ಫಲಿತಾಂಶ ಮೇ 23ರಂದು ಹೊರಬೀಳಲಿದೆ. ಆದಾಗ್ಯೂ, ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಕೂಡ ಪ್ರಕಟವಾಗಿದ್ದು, ಬಹುತೇಕ ಎಲ್ಲ ಸಮೀಕ್ಷೆಗಳಲ್ಲಿ ಎನ್ಡಿಎ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಏತನ್ಮಧ್ಯೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಚುನಾವಣೋತ್ತರ ಸಮೀಕ್ಷೆಗಳಿಗೆ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಎಕ್ಸಿಟ್ ಪೋಲ್ ಗಾಸಿಪ್ ಅನ್ನು ನಾನು ನಂಬುವುದಿಲ್ಲ. ಎಕ್ಸಿಟ್ ಪೋಲ್ ಗಾಸಿಪ್ ಮೂಲಕ ಸಾವಿರಾರು EVM ಗಳನ್ನು ಬದಲಾಯಿಸುವ ಯೋಜನೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. ನಾನು ಎಲ್ಲ ವಿರೋಧ ಪಕ್ಷಗಳಿಗೆ ಒಗ್ಗೂಡಿ, ಬಲವಾಗಿ ಮತ್ತು ಧೈರ್ಯದಿಂದ ಇರುವಂತೆ ಮನವಿ ಮಾಡುತ್ತೇನೆ. ನಾವೆಲ್ಲರೂ ಈ ಹೋರಾಟವನ್ನು ಒಟ್ಟಿಗೆ ಹೋರಾಡುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
I don’t trust Exit Poll gossip. The game plan is to manipulate or replace thousands of EVMs through this gossip. I appeal to all Opposition parties to be united, strong and bold. We will fight this battle together
— Mamata Banerjee (@MamataOfficial) May 19, 2019
ಬಹುತೇಕ ಎಲ್ಲ ಮಾಧ್ಯಮಗಳ ಚುನಾವಣೋತ್ತರ ಸಮೀಕ್ಷೆಗಳ ಪ್ರಕಾರ 2019 ರಲ್ಲಿ ಮತ್ತೊಮ್ಮೆ ಮೋದಿ ಸರಕಾರ ರಚನೆಯಾಗಲಿದೆ. ಝೀ ಮಹಾ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ನಾಯಕತ್ವದಲ್ಲಿ ಎನ್ಡಿಎ 300 ಸ್ಥಾನಗಳನ್ನು ಪಡೆಯಲಿದೆ ಎಂದು ಹೇಳಲಾಗಿದೆ. ಯುಪಿಎಗೆ 128 ಮತ್ತು ಇತರರು 114 ಸ್ಥಾನಗಳನ್ನು ಪಡೆಯುವ ಸಾಧ್ಯತೆ ಎಂದು ಹೇಳಲಾಗಿದೆ.