ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ತಲುಪಿದೆ. ಪರಿಸ್ಥಿತಿ ಹೇಗಿದೆ ಎಂದರೆ ದೇಶದ ಅನೇಕ ನಗರಗಳಲ್ಲಿ ಈರುಳ್ಳಿ ಬೆಲೆ ದ್ವಿಶತಕ ಬಾರಿಸಲಿದೆ ಎನ್ನಲಾಗುತ್ತಿದೆ. ಇಂದೂ ಕೂಡ ಸಂಸತ್ತಿನ ಉಭಯ ಸದನಗಳಲ್ಲಿ ದುಬಾರಿ ಈರುಳ್ಳಿ ಬೆಲೆಯ ಕುರಿತು ಕೋಲಾಹಲ ಸೃಷ್ಟಿಯಾಗಿದೆ. ಏತನ್ಮಧ್ಯೆ ಕೇಂದ್ರ ಸರ್ಕಾರದ ಮಂತ್ರಿಗಳು ಮಾತ್ರ ದುಬಾರಿ ಈರುಳ್ಳಿ ಬೆಲೆಯಿಂದ ತತ್ತರಿಸಿ ಹೋದ ಜನರ ಗಾಯದ ಮೇಲೆ ಉಪ್ಪು ಸುರಿಯುತ್ತಿದ್ದಾರೆ. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬಳಿಕ ಇದೀಗ ಮತ್ತೋರ್ವ ಕೇಂದ್ರ ಸಚಿವ ಅಶ್ವಿನಿ ಚೌಬೆ ಈರುಳ್ಳಿ ಬೆಲೆ ಕುರಿತು ಹೇಳಿಕೆಯೊಂದನ್ನು ನೀಡಿದ್ದು, ಇದು ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಹೌದು, ಚೌಬೆ, ನಾನೋರ್ವ ಸಸ್ಯಾಹಾರಿ ಮನುಷ್ಯ ಮತ್ತು ಇದುವರೆಗೂ ನಾನು ಈರುಳ್ಳಿ ರುಚಿ ನೋಡಿಲ್ಲ, ಆದ್ದರಿಂದ ನನ್ನಂತಹ ಮನುಷ್ಯನಿಗೆ ಈರುಳ್ಳಿ ಸ್ಥಿತಿಯ ಬಗ್ಗೆ ಏನು ಗೊತ್ತು?" ಎಂದಿದ್ದಾರೆ.
#WATCH "I am a vegetarian. I have never tasted an onion. So, how will a person like me know about the situation (market prices) of onions," says Union Minister Ashwini Choubey pic.twitter.com/cubekfUrYW
— ANI (@ANI) December 5, 2019
ಇದಕ್ಕೂ ಮುನ್ನ ಬುಧವಾರ ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ ಕುರಿತು ಸಂಸತ್ತಿನಲ್ಲಿ ಕೋಲಾಹಲ ಸೃಷ್ಟಿಯಾದ ವೇಳೆ, ದೇಶದ ಹಣಕಾಸು ಸಚಿವರೇ ಉತ್ತರಿಸಲು ಮುಂದಾಗಿದ್ದರು. ಈ ವೇಳೆ ಈರುಳ್ಳಿ ಬೆಲೆ ನಿಯಂತ್ರಣದಲ್ಲಿಡಲು ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ವಿತ್ತ ಸಚಿವರು ಸಂಸತ್ತಿನಲ್ಲಿ ಮಾಹಿತಿ ನೀಡಿದ್ದರು. ಆದರೆ, ಈ ಮಧ್ಯೆ ಸಂಸತ್ತಿನ ಸದಸ್ಯರೊಬ್ಬರು ತಮ್ಮ ಪಟ್ಟು ಬಿಗಿಗೊಳಿಸಿದಾಗ, ಈರುಳ್ಳಿ ಬೆಲೆಗಳ ಬಗ್ಗೆ ವಿತ್ತ ಸಚಿವರು ನೀಡಿದ ಹೇಳಿಕೆಗೆ ಸಂಸತ್ತಿನಲ್ಲಿ ಎಲ್ಲರು ಬೆಚ್ಚಿಬಿದ್ದಿದ್ದಾರೆ. ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸೀತಾರಾಮನ್, "ನಾನು ಈರುಳ್ಳಿ ತಿನ್ನುವುದಿಲ್ಲ. ಆದ್ದರಿಂದ ಆ ವಿಷಯ ನನಗೆ ಹೆಚ್ಚು ಸಂಬಂಧಪಡುವುದಿಲ್ಲ. ಅಷ್ಟೇ ಅಲ್ಲ ನನ್ನ ಕುಟುಂಬದಲ್ಲಿಯೂ ಕೂಡ ಈರುಳ್ಳಿ ಹಾಗೂ ಬೆಳ್ಳುಳ್ಳಿಗೆ ಹೆಚ್ಚಿನ ಮಹತ್ವ ನೀಡಲಾಗುವುದಿಲ್ಲ" ಎಂದು ಹೇಳಿದ್ದರು.
ದೇಶದ ಜನರು ಕಳೆದ ಹಲವಾರು ದಿನಗಳಿಂದ ಹೆಚ್ಚಾಗುತ್ತಿರುವ ಈರುಳ್ಳಿ ಬೆಲೆಗೆ ಕಣ್ಣೀರು ಹಾಕುತ್ತಿದ್ದಾರೆ. ಆದರೆ, ಈರುಳ್ಳಿ ಬೆಲೆ ಇಳಿಕೆಯಾಗುವ ಯಾವುದೇ ಸಂಕೇತ ಇದುವರೆಗೂ ಗೋಚರಿಸುತ್ತಿಲ್ಲ. ಅನೇಕ ರಾಜ್ಯಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 120 ರೂಪಾಯಿವರೆಗೆ ತಲುಪಿದೆ. ಕೋಲ್ಕತ್ತಾದಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ 150 ರೂ.ಗೆ ತಲುಪಿದೆ. ದೆಹಲಿಯಲ್ಲೂ ಪರಿಸ್ಥಿತಿ ಉತ್ತಮವಾಗಿಲ್ಲ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈರುಳ್ಳಿ ಆಮದು ಕುಂಠಿತಗೊಂಡಿದೆ. ದೆಹಲಿ ಕೆಲವು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ ಈರುಳ್ಳಿಯನ್ನು 80 ರಿಂದ 90 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ, ಆದರೆ ಅಲ್ಲಿನ ಚಿಲ್ಲರೆ ಮಾರುಕಟ್ಟೆಯಲ್ಲಿ ಮಾತ್ರ ಬೆಲೆ ಇಳಿಕೆಯ ಯಾವುದೇ ಸಂಕೇತ ಗೋಚರಿಸುತ್ತಿಲ್ಲ.