ನವದೆಹಲಿ: ಉತ್ತರಾಖಂಡ್'ನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಹಾನಿಯುಂಟಾಗಿದ್ದು, ರಾಜ್ಯ ರಾಜಧಾನಿ ಡೆಹರಾಡೂನ್'ನಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ನದಿಗಳು ತುಂಬಿ ಹರಿಯುತ್ತಿದ್ದು, ಹಲವೆಡೆ ಸೇತುವೆಗಳು ಕೊಚ್ಚಿಹೋಗಿವೆ.
ಡೆಹ್ರಾಡೂನ್ನ ಸೀಮಾದ್ವಾರದಲ್ಲಿ ಕಟ್ಟಡವೊಂದು ಕುಸಿದುಬಿದ್ದ ಪರಿಣಾಮ ನಾಲ್ವರು ಮೃತಪಟ್ಟಿದ್ದು, ದಲನ್ವಾಲ, ಸಹಸ್ಪುರ್ ಮತ್ತು ಬಲ್ಲಿವಾಲ ಪ್ರದೇಶಗಳಲ್ಲಿ ಮೂರೂ ಮಂದಿ ನೀರಿನಲ್ಲಿ ಕೊಚ್ಚಿಹೊಗಿದ್ದಾರೆ.
ರಾಜ್ಯದ ಕೆಲವು ಹೆದ್ದಾರಿಗಳಲ್ಲಿ ಭೂಕುಸಿತ ಸಂಭವಿಸಿದ್ದು, ಸಂಚಾರ ನಿರ್ಬಂಧಿಸಲಾಗಿದೆ. ಚಂಬಾ ಮತ್ತು ಹೃಷಿಕೇಶವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 94ರ ಫ್ಹಕೊತ್ ಮತ್ತು ಭಿನ್ನು ಬಳಿ ಭೂಕುಸಿತದಿಂದ ಸಂಚಾರ ಸ್ಥಗಿತಗೊಂಡಿದ್ದು, ಮಣ್ಣು ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ.
ರಾಜ್ಯದ ಚಮೋಲಿ, ಪೌರಿ ಮತ್ತು ರುದ್ರಪ್ರಯಾಗ್ ಜಿಲ್ಲೆಗಳಲ್ಲಿ ಬುಧವಾರ ಭಾರೀ ಮಳೆ ಎಚ್ಚರಿಕೆ ನೀಡಲಾಗಿದೆ. ಏತನ್ಮಧ್ಯೆ, ನೈಸರ್ಗಿಕ ವಿಕೋಪದ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರವಿಂದ್ರ ಸಿಂಗ್ ರಾವತ್ ಎಲ್ಲಾ ಅಧಿಕಾರಿಗಳ ರಜೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ. ಎಲ್ಲ ಅಧಿಕಾರಿಗಳೂ ತಮ್ಮ ಕಾರ್ಯಕ್ಕೆ ಹಾಜರಾಗುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ.
ಭಾರತೀಯ ವಾಯುಪಡೆ, ನೌಕಾಪಡೆ ಮತ್ತು ಸೇನಾ ಪಡೆಗಳು ವಿಪತ್ತು ನಿರ್ವಹಣಾ ಸೇವೆಗೆ ಧಾವಿಸಿದ್ದು, ಸಾವಿರಾರು ಜನರನ್ನು ರಕ್ಷಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಅಲ್ಲದೆ, ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ), ಬಾರ್ಡರ್ ಸೆಕ್ಯುರಿಟಿ ಫೋರ್ಸ್ (ಬಿಎಸ್ಎಫ್)ಗಳೂ ರಕ್ಷಣಾ ಕಾರ್ಯಾಚರಣೆಗಳಲ್ಲಿ ತೊಡಗಿವೆ.