ಬೆಂಗಳೂರು: ಇಂದೇ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚನೆ ನೀಡಿದ್ದರೂ ವಿಧಾನಸಭೆ ಕಲಾಪ ಸಂದರ್ಭದಲ್ಲಿ ಆಡಳಿತ ಮತ್ತು ವಿಪಕ್ಷ ನಾಯಕರ ಗದ್ದಲದಿಂದಾಗಿ ಕಲಾಪ ನಾಳೆಗೆ ಮುಂದೂಡಿದ ಬೆನ್ನಲ್ಲೇ ರಾಜ್ಯಪಾಲರು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ.
ಏನೇ ಆಗಲಿ, ನಾಳೆ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ವಿ.ಆರ್.ವಾಲಾ ಅವರು ಸಿಎಂ ಕುಮಾರಸ್ವಾಮಿಗೆ ನಿರ್ದೇಶನ ನೀಡಿದ್ದಾರೆ. ಆರ್ಟಿಕಲ್ 175(2)ರ ಪ್ರಕಾರ ಬಹುಮತ ಸಾಬೀತಿಗೆ ರಾಜ್ಯಪಾಲರು ಗಡುವು ನೀಡಿದ್ದಾರೆ.
ರಾಜ್ಯಪಾಲರ ನಿರ್ದೇಶನದಲ್ಲಿ ಏನಿದೆ?
"ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ನೀವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದೀರಿ. ಕರ್ನಾಟಕ ವಿಧಾನಸಭೆಯು 224 ಸಂಖ್ಯಾಬಲವನ್ನು ಹೊಂದಿದ್ದು, ಇದರಲ್ಲಿ ಜೆಡಿಎಸ್ 37, ಕಾಂಗ್ರೆಸ್ 79, ಕೆಪಿಜೆಪಿ ಯಿಂದ 1, ಬಿಎಸ್ಪಿ ಪಕ್ಷದಿಂದ 1, ಪಕ್ಷೇತರ ಶಾಸಕ 1 ಮತ್ತು ಭಾರತಿಯ ಜನತಾ ಪಕ್ಷದ 105 ಸದಸ್ಯರಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ನನ್ನನ್ನು ಭೇಟಿಯಾಗಿ ರಾಜೀನಾಮೆ ನೀಡಿರುವ ಬಗ್ಗೆ ತಿಳಿಸಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಒಟ್ಟು 15 ಶಾಸಕರು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತು ಈಗಾಗಲೇ ಇಬ್ಬರು ಶಾಸಕರು ಸರ್ಕಾರಕ್ಕೆ ತಮ್ಮ ಬೆಂಬಲ ಹಿಂಪಡೆದಿದ್ದಾರೆ. ಹೀಗಾಗಿ ನಿಮ್ಮ ಸರ್ಕಾರ ಅಲ್ಪ ಮತಕ್ಕೆ ಕುಸಿದಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಅಲ್ಲದೆ, ಜುಲೈ 18, 2019ರಂದು ವಿಶ್ವಾಸಮತ ಯಾಚನೆಗೆ ಸಮಯ ನಿಗದಿ ಮಾಡಿದ್ದಾರೂ ವಾದ-ವಿವಾದಗಳಿಂದ ಸದನ ಮುಂದೂಡಲ್ಪಟ್ಟಿದೆ. ಹೀಗಾಗಿ ಸಂವಿಧಾನಾತ್ಮಕವಾಗಿ ಪ್ರಜಾಪ್ರಭುತ್ವದಲ್ಲಿ ಇದು ಮುಂದುವರಿಯಲು ಸಾಧ್ಯವಿಲ್ಲ.
ಆದ್ದರಿಂದ ಆರ್ಟಿಕಲ್ 175(2)ರ ಅಡಿಯಲ್ಲಿ ಸ್ಪೀಕರ್ ಅವರಿಗೆ ಸಂದೇಶ ರವಾನಿಸಿದ್ದೇನೆ. ಇಂದು ಸದನ ಮುಂದೂಡಲ್ಪಟ್ಟ ಕಾರಣ ಜುಲೈ 19ರಂದು ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಿ" ಎಂದು ಸಿಎಂ ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ನಿರ್ದೇಶನ ನೀಡಿದ್ದಾರೆ.
ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಮಾಡುತ್ತಿದ್ದಾರೆ ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ಸಂದೇಶ ರವಾನಿಸಿದ್ದರು. ಆದರೆ ಸ್ಪೀಕರ್ ರಮೇಶ್ ಕುಮಾರ್ ಅವರು ವಿಪ್ ಜಾರಿ ಸಂಬಂಧ ಚರ್ಚೆಗೆ ತೆರಳಿದ್ದ ಕಾರಣ ಸದನವನ್ನು ಮುನ್ನಡೆಸಿದ್ದ ಉಪಸಭಾಪತಿಗಳು ಗದ್ದಲ ಆರಂಭವಾದ ಕಾರಣ ನಾಳೆಗೆ ಕಲಾಪವನ್ನು ಮುಂದೂಡಿದ್ದರು.