ನವದೆಹಲಿ: ಇದುವರೆಗೂ ಮೊಬೈಲ್ ಸಂಖ್ಯೆ ಪೋರ್ಟ್ ಮಾಡೋದು ಇದೀಗ ಮತ್ತಷ್ಟು ಸರಳಗೊಂಡಿದ್ದು, ಭಾರತೀಯ ಟೆಲಿಕಾಂ ನಿಯಂತ್ರಣ ಮಂಡಳಿ ನಿಯಮದಲ್ಲಿ ಬದಲಾವಣೆ ಮಾಡಿದೆ. ಹೀಗಾಗಿ ಟೆಲಿಕಾಂ ಕಂಪನಿಗಳಿಗೆ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗಿದೆ.
ಈ ಹಿಂದೆ ಮೊಬೈಲ್ ನಂಬರ್ ಅನ್ನು ಒಂದು ನೆಟ್ವರ್ಕ್ ನಿಂದ ಮತ್ತೊಂದು ಟೆಲಿಕಾಂ ನೆಟ್ವರ್ಕ್ ಗೆ ಬದಲಾವಣೆ ಮಾಡಲು ಈ ಹಿಂದೆ ಒಂದು ವಾರಗಳ ಕಾಲ ಕಾಯಬೇಕಿತ್ತು. ಆದರೀಗ ಈ ನಿಯಮದಲ್ಲಿ ಬದಲಾವಣೆ ತರಲಾಗಿರುವುದರಿಂದ ಈಗ ಕೇವಲ ಎರಡೇ ದಿನಗಳಲ್ಲಿ ನೆಟ್ವರ್ಕ್ ಬದಲಿಸಿಕೊಳ್ಳಬಹುದಾಗಿದೆ. ಇಲ್ಲಿಯವರೆಗೂ ಪೋರ್ಟ್ ಮಾಡಿಸುವ ವೇಳೆ ಸೇವೆ ಸ್ಥಗಿತದ ಭಯ ಹೊಂದಿದ್ದ ಗ್ರಾಹಕರಿಗೆ ಈ ನಿಯಮ ಬದಲಾವಣೆಯಿಂದ ನಿರಾಳವೆನಿಸಿದೆ.
ಹೊಸ ನಿಯಮದ ಪ್ರಕಾರ, ಎಂಎನ್ಪಿ ಸರ್ವೀಸ್ ಪ್ರೊವೈಡರ್ ಪ್ರಕ್ರಿಯೆಯಲ್ಲಿ ಎರಡೇ ದಿನಗಳಲ್ಲಿ ಹೊಸ ನೆಟ್ವರ್ಕ್ಗೆ ಗ್ರಾಹಕರು ಪೋರ್ಟ್ ಆಗಬಹುದು. ಪೋರ್ಟ್ ಆಗಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕಾಗುತ್ತದೆ.
* ನೀವೇನಾದರೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಪೋರ್ಟ್ ಮಾಡಲು ಬಯಸಿದರೆ ಮೊದಲು ನಿಮ್ಮ ಮೊಬೈಲ್ ಸಂಖ್ಯೆಯಿಂದ 'PORT' ಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟು ನೀವು ಬಳಸುತ್ತಿರುವ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. ಆ ಮೆಸೇಜ್ ಅನ್ನು 1900ಗೆ ಕಳುಹಿಸಿ.
* ಬಳಿಕ 1901 ಸಂಖ್ಯೆಯಿಂದ ಸಂದೇಶದ ಮೂಲಕ ನಿಮ್ಮ ರಿಕ್ವೆಸ್ಟ್ ಅನ್ನು ಪರಿಶೀಲಿಸಲು ಟೆಲಿಕಾಂ ಕಂಪನಿ ತಿಳಿಸುತ್ತದೆ.
* ನಿಮ್ಮ ಮನವಿಯನ್ನು ನೀವು ಬಳಸುತ್ತಿರುವ ಟೆಲಿಕಾಂ ಕಂಪನಿ ಪರಿಶೀಲನೆ ಮಾಡಿದ ಬಳಿಕ ಕೆಲವೇ ಗಂಟೆಗಳಲ್ಲಿ ಯುನಿಕ್ ಪೋರ್ಟಲ್ ಕೋಡ್ ಬರುತ್ತದೆ. ಈ ಕೋಡ್ ಮೂಲಕ ನೀವು ನಿಮ್ಮ ಸಿಮ್ ಅನ್ನು ಇತರೆ ಯಾವುದೇ ಟೆಲಿಕಾಂ ಕಂಪೆನಿಯೊಂದಿಗೆ ಬದಲಾಯಿಸಿಕೊಳ್ಳಬಹುದು.
* ಬಳಿಕ ನೀವು ಪೋರ್ಟ್ ಆಗಲು ಬಯಸುವ ಟೆಲಿಕಾಂ ಸ್ಟೋರ್ ಗೆ ಹೋಗಿ ನಿಮ್ಮ ಎರಡು ಭಾವಚಿತ್ರ ಮತ್ತು ಐಡಿ ಕಾರ್ಡ್ ಪ್ರತಿಯೊಂದಿಗೆ ಯುನಿಕ್ ಪೋರ್ಟಲ್ ಕೋಡ್ ಸಲ್ಲಿಸಿ ಪೋರ್ಟ್ ಮಾಡಲು ಹೇಳಿ.
* ಇದಾದ ಎರಡೇ ದಿನಗಳಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೂತನ ಟೆಲಿಕಾಂ ಕಂಪನಿಗೆ ಪೋರ್ಟ್ ಆಗಲಿದೆ.