ನವದೆಹಲಿ: ಗೂಗಲ್ ಮಾಲೀಕತ್ವದ ಜಿ-ಮೇಲ್ ಲಾಭ ಪಡೆಯುತ್ತಿರುವ ಬಳಕೆದಾರರ ಪಾಲಿಗೆ ಗಂಭೀರ ಎಚ್ಚರಿಕೆಯೊಂದನ್ನು ಜಾರಿಗೊಳಿಸಲಾಗಿದೆ. ಇ-ಮೇಲ್ ಫಿಲ್ಟರ್ ನಲ್ಲಿ ಬಂದ ತಾಂತ್ರಿಕ ದೋಷದ ಕುರಿತು ಈ ಎಚ್ಚರಿಕೆ ಜಾರಿಗೊಳಿಸಲಾಗಿದೆ. ಲಕ್ಷಾಂತರ ಜಿಮೇಲ್ ಬಳಕೆದಾರರ ವೈಯಕ್ತಿಕ ಮಾಹಿತಿಯ ಜೊತೆಗೆ ಸ್ಪ್ಯಾಮಿಂಗ್ ನಡೆದಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. CNET.COM ವೆಬ್ಸೈಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ ಈ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ ಅಂಡ್ರಾಯಿಡ್ ಪೋಲೀಸ್ ಈ ಪ್ರಕರಣದ ತನಿಖೆ ಕೂಡ ನಡೆಸುತ್ತಿದ್ದು, ಜಿ-ಮೇಲ್ ಬಳಕೆದಾರರಿಗೆ ಈ ಕುರಿತು ಸೂಚನೆ ಕೂಡ ನೀಡಲಾಗಿದೆ.
ಸ್ಪ್ಯಾಮ್ ಮೆಸೇಜ್ ಅಥವಾ ಅನ್ ವಾಂಟೆಡ್ ಮೆಸೇಜ್ ಗಳನ್ನು ಜಿ-ಮೇಲ್ ಈ ಮೊದಲು ಬೇರೆಯೊಂದು ಫೋಲ್ಡರ್ ರಚಿಸುವ ಮೂಲಕ ಅವರುಗಳಿಗೆ ರವಾನಿಸುತ್ತಿತ್ತು. ಇಂತಹ ಮೇಲ್ ಗಳ ಮೇಲೆ ಕ್ಲಿಕ್ಕಿಸಿದಾಗ ಬಳಕೆದಾರರಿಗೆ ನಾಟ್ ಫಾರ್ ಸೇಫ್ ಸಂದೇಶ ಕಾಣಿಸಿಕೊಳ್ಳುತ್ತಿತ್ತು. ಆದರೆ ಇದರ ಸೆಟ್ಟಿಂಗ್ ನಲ್ಲಿ ಕಾಣಿಸಿಕೊಂಡ ದೋಷದ ಬಳಿಕ ಇದೀಗ, ಸ್ಪ್ಯಾಮ್ ಸಂದೇಶಗಳು ನೇರವಾಗಿ ಬಳಕೆದಾರರ ಮೇನ್ ಇನ್ಬಾಕ್ಸ್ ನಲ್ಲಿ ಬರುತ್ತಿವೆ. ಇದರಿಂದ ಬಳಕೆದಾರರ ಮಾಹಿತಿಗೆ ಆತಂಕ ಎದುರಾಗಿದೆ.
CNET.COM ಪ್ರಕಟಿಸಿರುವ ವರದಿ ನಿಜ ಎಂದೇ ಸಾಬೀತಾದಲ್ಲಿ ಗೂಗಲ್ ಈ ಫಿಲ್ಟರ್ ನಲ್ಲಿ ಕಂಡುಬಂದಿರುವ ದೋಷದಿಂದ ಲಕ್ಷಾಂತರ ಬಳಕೆದಾರರಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಒಪ್ಪಿಕೊಂಡಿದೆ ಎನ್ನಲಾಗಿದೆ. ಆದರೆ, ಸದ್ಯ ಈ ದೋಷವನ್ನು ಸರಿಪಡಿಸಲಾಗಿದೆ ಎನ್ನಲಾಗಿದ್ದರೂ ಕೂಡ ಹಲವು ಬಳಕೆದಾರರಿಂದ ಈ ಕುರಿತು ದೂರುಗಳು ಬರುತ್ತಿವೆ. ಈ ಹಿಂದೆಯೂ ಕೂಡ ಅನ್ ವಾಂಟೆಡ್ ಸಂದೇಶಗಳು ಜಿ-ಮೇಲ್ ನ ಇನ್ಬಾಕ್ಸ್ ಬರುವ ಕುರಿತು ದೂರುಗಳು ಕೂಡ ಕೇಳಿಬಂದಿದ್ದವು.
ಅಪಾಯ ಏನು?
ಈ ವೈಶಿಷ್ಟ್ಯದಲ್ಲಿ ತಾಂತ್ರಿಕ ದೋಷ ಕಂಡು ಬರುವುದರಿಂದ ವೈರಸ್ ಅಥವಾ ಮಾಲ್ವೇರ್ ಗಳನ್ನು ಹೊಂದಿರುವ ಮೇಲ್ ಗಳು ನೇರವಾಗಿ ಬಳಕೆದಾರರ ಇನ್ಬಾಕ್ಸ್ ನಲ್ಲಿ ಬಂದು ಲ್ಯಾಂಡ್ ಆಗುತ್ತವೆ. ಅಚಾತುರ್ಯದಿಂದ ಒಂದು ವೇಳೆ ಬಳಕೆದಾರರು ಈ ಮೇಲ್ ಗಳ ಮೇಲೆ ಕ್ಲಿಕ್ಕಿಸಿದರೆ, ಅವರ ಸಿಸ್ಟಮ್ ಹಾಗೂ ಜಿ-ಮೇಲ್ ವೈರಸ್ ದಾಳಿಗೆ ತುತ್ತಾಗಿ ವೈಯಕ್ತಿಕ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಕೆಲ ದಿನಗಳ ಹಿಂದೆ ಜಿ-ಮೇಲ್ ಕೆಲ ಗಂಟೆಗಳ ಕಾಲ ಬಂದ್ ಆದ ಕಾರಣ ಕೂಡ ಬಳಕೆದಾರರಿಗೆ ತೊಂದರೆ ಎದುರಾಗಿತ್ತು.