ನವದೆಹಲಿ: ಯಾವುದಾದರೂ ಬಿಸಿನೆಸ್ ಮಾಡ್ಬೇಕು, ಆದ್ರೆ ಸಾಲ ಪಡೆಯಲು ಬ್ಯಾಂಕ್ ಗಳಿಗೆ ಅಲೆದು, ಅಲೆದು ಸಾಕಾಗಿದೆಯೇ? ಆದರೆ ಅದಕ್ಕೆಲ್ಲ ಕೇಂದ್ರ ಸರ್ಕಾರ ಪೂರ್ಣ ವಿರಾಮ ಹಾಕಲು ಮುಂದಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದೆ.
ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಉತ್ತೇಜಿಸಲು 12 ನೀತಿಗಳನ್ನು ಜಾರಿಗೊಳಿಸಿರುವ ಕೇಂದ್ರ ಸರ್ಕಾರ, ಇದರಲ್ಲಿ 59 ನಿಮಿಷಗಳಲ್ಲಿ 1 ಕೋಟಿ ರೂಪಾಯಿ ತನಕ ಸಾಲ ನೀಡುವ ಯೋಜನೆ ಘೋಷಿಸಿದೆ. ಇದಕ್ಕಾಗಿ ನೀವು ಬ್ಯಾಂಕುಗಳಿಗೆ ಅಲೆಯುವ ಅಗತ್ಯವಿಲ್ಲ. ಕೇವಲ ಆನ್ ಲೈನ್ ನಲ್ಲಿ ಅರ್ಜಿ ಭರ್ತಿ ಮಾಡಿ ದಾಖಲೆಗಳನ್ನು ಅಪ್ಲೋಡ್ ಮಾಡಿದರೆ ಸಾಕು. ಕೇವಲ ಒಂದು ಗಂಟೆಯೊಳಗೆ ಸಾಲ ಮಂಜೂರಾಗಲಿದೆ. 10 ಲಕ್ಷ ರೂ.ಗಳಿಂದ 1 ಕೋಟಿ ರೂ.ವರೆಗೆ ಆನ್ ಲೈನ್ ಮೂಲಕ ಸಂಪರ್ಕರಹಿತ ವಾಣಿಜ್ಯ ಸಾಲ ದೊರೆಯಲಿದ್ದು ಶೇ.8 ಬಡ್ಡಿದರ ಅನ್ವಯವಾಗಲಿದೆ.
ಕೇವಲ 59 ನಿಮಿಷಗಳಲ್ಲಿ 1 ಕೋಟಿ ರೂಪಾಯಿ ತನಕ ಸಾಲ ಮಂಜೂರು ಮಾಡುವ ಆನ್ಲೈನ್ ವ್ಯವಸ್ಥೆ ಇದಾಗಿದ್ದು, ವಿಶ್ವ ಬ್ಯಾಂಕಿಂಗ್ನ ರ್ಯಾಕಿಂಗ್ನಲ್ಲೂ ಇದಕ್ಕೆ ಮಾನ್ಯತೆ ದೊರೆತಿದೆ. ಇನ್ನು ಇಂತಹ ಎಂಎಸ್ಎಂಇ ಘಟಕಗಳ ಉತ್ಪನ್ನಗಳ ಪೈಕಿ ಶೇ. 25ರಷ್ಟನ್ನು ಸಾರ್ವಜನಿಕ ವಲಯದ ಸಂಸ್ಥೆಗಳು ಕಡ್ಡಾಯವಾಗಿ ಖರೀದಿ ಮಾಡಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶಿಸಿದೆ.
ಹೆಚ್ಚಿನ ಮಾಹಿತಿಗೆ https://www.psbloansin59minutes.com ವೆಬ್ ಸೈಟ್'ಗೆ ಭೇಟಿ ನೀಡಿ. ಲಾಗಿನ್ ಆಗಿ. ಅಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ, ಅರ್ಜಿ ಭರ್ತಿ ಮಾಡಿ, ದಾಖಲೆಗಳನ್ನು ಒದಗಿಸಿ. ದಾಖಲೆಗಳು ನಿಖರವಾಗಿದ್ದಲ್ಲಿ ಕೇವಲ 59 ನಿಮಿಷಗಳಲ್ಲಿ ಸಾಲ ದೊರೆಯಲಿದೆ.