ನವದೆಹಲಿ: ರಾಷ್ಟ್ರಪಿತ ಗಾಂಧೀಜಿ 'ಮಹಾನ್' ನಾಯಕನಿಂದ 'ಮಹಾತ್ಮ' ಆಗಿದ್ದು ಹೇಗೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಯುವ ಕುತೂಹಲ ನಿಮಗಿದೆಯೇ? ಹಾಗಿದ್ದರೆ ನವದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಮೆರವಣಿಗೆಯನ್ನು ತಪ್ಪದೇ ವೀಕ್ಷಿಸಿ...
ಜನವರಿ 26ರಂದು ಗಣರಾಜ್ಯೋತ್ಸವದ ಅಂಗವಾಗಿ ನವದೆಹಲಿಯಲ್ಲಿ ನಡೆಯಲಿರುವ ಪೆರೇಡ್'ಗಾಗಿ ಗಾಂಧೀಜಿ ಮಹಾನ್ ನಾಯಕನಿಂದ ಮಹಾತ್ಮ ಆದದ್ದು ಹೇಗೆ ಎಂಬ ಬಗ್ಗೆ ಭಾರತೀಯ ರೈಲ್ವೆ ಇಲಾಖೆ ಸ್ತಬ್ಧ ಚಿತ್ರ ಸಿದ್ಧಪಡಿಸುತ್ತಿದೆ. ಈ ಸ್ತಬ್ಧ ಚಿತ್ರದಲ್ಲಿ 6 ಅಡಿ ಎತ್ತರದ ಗಾಂಧೀಜಿಯ ಮೂರ್ತಿ ಇರಲಿದೆ ಎನ್ನಲಾಗಿದೆ.
ಭಾರತೀಯ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಪ್ರಕಾರ, ಮಹಾತ್ಮ ಗಾಂಧೀಜಿಯ ಈ ಮೂರ್ತಿಯನ್ನು ಎರಡು ರೂಪದಲ್ಲಿ ಸಿದ್ಧಪಡಿಸಲು ನಿರ್ಧರಿಸಿದೆ. ಈ ಮೂರ್ತಿಯ ಒಂದು ಭಾಗದಲ್ಲಿ ಬ್ಯಾರಿಸ್ಟರ್ ಮೋಹನ್ ದಾಸ್ ಕರಂ ಚಂದ್ ಗಾಂಧಿ ಕಾಣಲಿದ್ದು, ಅದೇ ಮೂರ್ತಿಯ ಇನ್ನೊಂದು ಭಾಗದಲ್ಲಿ ಮಹಾತ್ಮ ಗಾಂಧೀಜಿ ಸ್ವರೂಪ ಕಾಣಲಿದೆ. ಅಷ್ಟೇ ಅಲ್ಲದೆ, ಈ ಸ್ತಬ್ಧ ಚಿತ್ರದ ಥೀಮ್'ಗೆ ಅನುಸಾರವಾಗಿ ಮೂರ್ತಿಯ ಎರಡೂ ರೂಪಗಳಿಗೂ ಬೇರೆ ಬೇರೆ ಬಣ್ಣಗಳಲ್ಲಿ ಬಿಂಬಿಸಲಾಗುವುದು ಎಂದು ಹೇಳಿದ್ದಾರೆ.
360 ಡಿಗ್ರಿಯಲ್ಲಿ ತಿರುಗಲಿದೆ ಈ ಮೂರ್ತಿ
ಈ ಸ್ತಬ್ಧ ಚಿತ್ರ ರಾಜಪಥದಲ್ಲಿ ಸಾಗುವಾಗ ಮಹಾತ್ಮ ಗಾಂಧೀಜಿ ಮೂರ್ತಿಯು 360ಡಿಗ್ರಿ(ವೃತ್ತಾಕಾರ)ಯಲ್ಲಿ ತಿರುಗಲಿದೆ. ಇದರಿಂದ ರಾಜಪಥದಲ್ಲಿ ಕುಳಿತು ಪೆರೇಡ್ ವೀಕ್ಷಿಸುವ ಜನರಿಗೆ ಗಾಂಧೀಜಿ ಅವರ ಎರಡೂ ರೂಪಗಳ ದರ್ಶನವಾಗಲಿದೆ. ಇದರ ಜೊತೆಗೆ ರೈಲ್ವೆ ಇಲಾಖೆ ಆಡಿಯೋ ಸಹ ತಯಾರಿಸಿದ್ದು, ಮಹಾತ್ಮ ಗಾಂಧೀಜಿಯವರ ಜೀವನಗಾಥೆಯನ್ನು ಹೇಳುವ ಪ್ರಯತ್ನ ಮಾಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬುಲೆಟ್ ಟ್ರೈನ್ ಮತ್ತು ಟ್ರೈನ್ 18ಗಳ 3D ಅವತರಣಿಕೆ
ಇದೇ ಸಂದರ್ಭದಲ್ಲಿ ಇತ್ತೀಚೆಗಷ್ಟೇ ಸಂಚಾರ ಆರಂಭಿಸಿರುವ ಭಾರತೀಯ ರೈಲ್ವೆ ಇಲಾಖೆಯ ಹಿರಿಮೆ ಎನಿಸಿರುವ ಬುಲೆಟ್ ಟ್ರೈನ್ ಮತ್ತು ಟ್ರೈನ್ 18ಗಳನ್ನು 3D ಅವತರಣಿಕೆಯಲ್ಲಿ ರೈಲ್ವೆ ಇಲಾಖೆ ಪ್ರದರ್ಶಿಸಲಿದೆ. ಇದರಿಂದಾಗಿ ರಾಜಪಥದಲ್ಲಿ ಕುಳಿತು ದೂರದಿಂದ ಮೆರವಣಿಗೆ ವೀಕ್ಷಿಸುವವರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.