ಬೆಂಗಳೂರು: ಅಸ್ಸಾಂ ಪ್ರವಾಹ ಪರಿಸ್ಥಿತಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕಳವಳ ವ್ಯಕ್ತಪಡಿಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ (Narendra Modi) ಪತ್ರ ಬರೆದಿದ್ದಾರೆ. ಪತ್ರದಲ್ಲಿ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಪತ್ರದ ಪೂರ್ಣ ಪಾಠ ಇಲ್ಲಿದೆ.
ಅಸ್ಸಾಂನಲ್ಲಿನ ಪ್ರವಾಹದ (Assam Flood) ವರದಿಗಳಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಕಳೆದ ಕೆಲವು ದಿನಗಳಿಂದ ಅಲ್ಲಿನ ಪರಿಸ್ಥಿತಿ ಸ್ಥಿರವಾಗಿ ಹದಗೆಡುತ್ತಿದೆ ಎಂದು ನನ್ನ ಗಮನಕ್ಕೆ ಬಂದಿದೆ, ಇತ್ತೀಚಿನ ವರದಿಗಳಲ್ಲಿ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವುದು ನೋವಿನ ಸಂಗತಿ. ಈ ಪ್ರವಾಹದಿಂದ ಸುಮಾರು ನಲವತ್ತು ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.
ಸುಮಾರು 480 ಪರಿಹಾರ ಶಿಬಿರಗಳನ್ನು ಈಗಾಗಲೇ ಅಲ್ಲಿನ ರಾಜ್ಯ ಸರ್ಕಾರ ಸ್ಥಾಪಿಸ್ಸಿದ್ದರೂ ಕೂಡ ಸಾರ್ವಜನಿಕರ ಮೂಲಸೌಕರ್ಯಗಳಿಗೆ ದೊಡ್ಡ ಪ್ರಮಾಣದ ಪೆಟ್ಟು ಬಿದ್ದಿದೆ. ಜೊತೆಗೆ ಸುಮಾರು 60 ಕ್ಕೂ ಹೆಚ್ಚು ಪ್ರಾಣಿಗಳು ಕಾಜಿರಂಗಾ ರಾಷ್ಟ್ರೀಯ ಉದ್ಯಾನವನದಲ್ಲಿ ಸಾವನ್ನಪ್ಪಿರುವುದು ಕೂಡ ಬಹಳ ದುಃಖಕರವಾಗಿದೆ.
ಕೋವಿಡ್ -19 (Covid-19) ಸಾಂಕ್ರಾಮಿಕ ರೋಗವು ದೇಶಾದ್ಯಂತ ಉಲ್ಬಣಗೊಳ್ಳುತ್ತಿರುವಾಗ ಅಸ್ಸಾಂನ ಜನರು ಪ್ರವಾಹ ಮತ್ತು ಅದರಿಂದ ಉಂಟಾದ ಸಾವು ನೋವುಗಳ ಜೊತೆ ಹೋರಾಡುತ್ತಿದ್ದಾರೆ ಮತ್ತು ಈ ಪ್ರವಾಹದಿಂದ ಹಾನಿಗೊಳಗಾಗಿರುವ ಪ್ರದೇಶದಿಂದ ಸ್ಥಳಾಂತರಗಳ್ಳಲು ಹೋರಾಡುತ್ತಿರುವುದು ನೋಡಿದರೆ ಮನಸ್ಸಿಗೆ ಬಹಳ ನೋವುಂಟಾಗುತ್ತದೆ.
ಉದಯೋನ್ಮುಖ ರಾಜ್ಯವಾದ ಅಸ್ಸಾಂನ ಪರಿಸ್ಥಿತಿಯ ಬಗ್ಗೆ ತುರ್ತು ಗಮನ ಹರಿಸಬೇಕೆಂದು ನಾನು ಪ್ರಧಾನ ಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ ಮತ್ತು ಅಲ್ಲಿನ ರಾಜ್ಯ ಸರ್ಕಾರಕ್ಕೆ ಗರಿಷ್ಠ ನೆರವು ನೀಡಬೇಕೆಂದು ಈ ಪತ್ರದ ಮೂಲಕ ಆಗ್ರಹಿಸುತ್ತಿದ್ದೇನೆ.
ನಾನು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮತ್ತು ಅದಾದ ನಂತರವೂ ಕೂಡ ಅಸ್ಸಾಂ ಜನತೆ ಮತ್ತು ಈಶಾನ್ಯಾ ರಾಜ್ಯಗಳ ಜನರು ನನ್ನ ಬಗ್ಗೆ ಅತೀವ ಪ್ರೀತಿ ಮತ್ತು ವಿಶ್ವಾಸ ತೋರಿಸಿದ್ದಾರೆ. ಅಲ್ಲಿನ ಜನರು ಆದಷ್ಟು ಬೇಗ ಈ ಸಂಕಷ್ಟದಿಂದ ಹೊರ ಬರಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ. ಈಗ ದೇಶಕ್ಕೆ ಆವರಿಸಿರುವ ಸಾಂಕ್ರಾಮಿಕ ರೋಗ ಕಡಿಮೆ ಆದ ತಕ್ಷಣ ನಾನು ಅಸ್ಸಾಂ ಹಾಗು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತೇನೆ.
ಎಚ್.ಡಿ.ದೇವೇಗೌಡ (HD Devegowda)
ಮಾಜಿ ಪ್ರಧಾನ ಮಂತ್ರಿ
ಮತ್ತು ರಾಜ್ಯಸಭಾ ಸದಸ್ಯರು