ಬೆಂಗಳೂರು : ಭ್ರಷ್ಟರ ಹುಟ್ಟಡಗಿಸಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ, ಮಾಜಿ ಲೋಕಾಯುಕ್ತ ಎನ್.ವೆಂಕಟಾಚಲ ಬುಧವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದಾರೆ.
ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇವರಿಗೆ 88 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರರು ಹಾಗೂ ಪತ್ನಿಯನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರವನ್ನು ವಯಾಲಿಕಾವಲ್ ಮನೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು. ಅಮೆರಿಕದಲ್ಲಿರುವ ಪುತ್ರ ಆಗಮಿಸಿದ ಬಳಿಕ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಲೋಕಾಯುಕ್ತ ಸಂಸ್ಥೆಗೆ ಜೀವ ತುಂಬಿದ ಎನ್.ವೆಂಕಟಾಚಲ ಅವರು, ಅದಕ್ಕೊಂದು ಹೊಸ ರೂಪ ನೀಡಿ ತಮ್ಮ ಕಾರ್ಯವೈಖರಿಯ ಮೂಲಕ ವಿಶೇಷ ಚೈತನ್ಯ ತುಂಬಿದರು. ಜನರ ದುರುಗಳಿಗೆ ಸ್ಪಂದಿಸಿ, ಭ್ರಷ್ಟರ ಹೆಡೆಮುರಿಕಟ್ಟಿದ್ದ ಇವರ ಅವಧಿಯಲ್ಲಿ ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಪ್ರಕರಣಗಳು ಬಯಲಿಗೆ ಬಂದವು. ಭ್ರಷ್ಟರ ವಿರುದ್ಧ ಮಾತನಾಡಲು ಜನರು ಧೈರ್ಯದಿಂದ ಮುಂದೆ ಬಂದರು. ಇವರ ಅವಧಿಯಲ್ಲಿ ಸಾಕಷ್ಟು ರಾಜಕಾರಣಿಗಳ ಭ್ರಷ್ಟ ರೂಪ ಬಯಲಾಗಿತ್ತು.