ಪೆಟ್ರೋಲ್ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ಸ್ನೇಹಿತರೆಲ್ಲರೂ ಸೇರಿ ಮತ್ತೋರ್ವ ಸ್ನೇಹಿತನಿಗೆ ವಿವಾಹದ ಉಡುಗೊರೆಯಾಗಿ 5 ಲೀಟರ್ ಪೆಟ್ರೋಲ್ ನೀಡಿದ ಘಟನೆ ತಮಿಳುನಾಡಿನ ಕಡಲೂರುನಲ್ಲಿ ನಡೆದಿದೆ.
ಮದುವೆಗೆ ಬಂದ ಅತಿಥಿಗಳು ನವ ದಂಪತಿಗಳು ಆರತಕ್ಷತೆಗೆ ನಿಂತ ಸಂದರ್ಭದಲ್ಲಿ ಶುಭ ಹಾರೈಸುತ್ತಿದ್ದಾಗ ಬಂದ ವರನ ಸ್ನೇಹಿತರ ಗುಂಪೊಂದು 5 ಲೀಟರ್ ಪೆಟ್ರೋಲ್ ಇರುವ ಕ್ಯಾನ್ ಅನ್ನು ಉಡುಗೊರೆಯಾಗಿ ನೀಡಿದೆ ಎಂದು ತಮಿಳು ವಾಹಿನಿ 'ಪುಥಿಯಾ ತಲೈಮುರೈ' ವರದಿ ಮಾಡಿದೆ. ಪೆಟ್ರೋಲ್ ಉಡುಗೊರೆಯನ್ನು ವರ ಸ್ವೀಕರಿಸಿದ್ದು, ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದೆ.
ದೇಶದಲ್ಲೇ ಅತಿ ಹೆಚ್ಚು ಪೆಟ್ರೋಲ್ ದರ ಹೊಂದಿರುವ ರಾಜ್ಯ ಎಂದರೆ ಅದು ತಮಿಳುನಾಡು. ಇಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 85.15 ರೂ.ಗೆ ಏರಿಕೆಯಾಗಿದೆ. ಮದುವೆಗೆ ದುಬಾರಿ ಉಡುಗೊರೆಗಳನ್ನು ಕೊಡುವುದು ಸರ್ವೇ ಸಾಮಾನ್ಯ. ಆದರೀಗ ಪೆಟ್ರೋಲ್ ಬೆಲೆಯೂ ಅಷ್ಟೇ ದುಬಾರಿ ಆಗಿರುವುದರಿಂದ ಅದನ್ನೇ ಉಡುಗೊರೆಯಾಗಿ ನೀಡಿದ್ದೇವೆ ಎಂದು ಸ್ನೇಹಿತರು ತಿಳಿಸಿದ್ದಾರೆ.
ಇದೇ ವೇಳೆ ಸೋಮವಾರ ಪೆಟ್ರೋಲ್ ಮತ್ತಿ ಡೀಸೆಲ್ ಬೆಲೆ ಮತ್ತಷ್ಟು ಹೆಚ್ಚಳವಾಗಿದೆ. ಕಳೆದ ಎರಡು ವಾರಗಳಿಂದ ಇಂಧನ ಬೆಲೆ ದಾಖಲೆಯ ಮಟ್ಟ ತಲುಪಿದ್ದು, ಆಗಸ್ಟ್ 1 ರಿಂದ ಪ್ರತಿದಿನವೂ ಇಂಧನ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಅಲ್ಲದೆ, ದೇಶಕ್ಕೆ ಅಗತ್ಯವಿರುವ ಶೇ.80ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಜಾಗತಿಕ ಕಚ್ಚಾ ತೈಲ ಬೆಲೆ ಏರಿಕೆಗೆ ಕಾರಣವಾಗಿದೆ.