ದೇಹವು ಫಿಟ್ ಆಗಿರುವಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ: ಪ್ರಧಾನಿ ನರೇಂದ್ರ ಮೋದಿ

ಫಿಟ್‌ನೆಸ್‌ ಕೇವಲ ಪದವಲ್ಲ, ಅದು ಆರೋಗ್ಯಕರ ಜೀವನದ ಸ್ಥಿತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.

Last Updated : Aug 29, 2019, 12:01 PM IST
ದೇಹವು ಫಿಟ್ ಆಗಿರುವಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ: ಪ್ರಧಾನಿ ನರೇಂದ್ರ ಮೋದಿ title=

ನವದೆಹಲಿ: ರಾಷ್ಟ್ರೀಯ ಕ್ರೀಡಾ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಫಿಟ್ ಇಂಡಿಯಾ ಆಂದೋಲನಕ್ಕೆ (#FitIndiaMovement) ಚಾಲನೆ ನೀಡಿದರು. ಜನರನ್ನು ಕ್ರೀಡೆ ಮತ್ತು ದೈಹಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಾರ್ಯಕ್ರಮವನ್ನು ಇಲ್ಲಿನ 'ಇಂದಿರಾ ಗಾಂಧಿ ಸ್ಟೇಡಿಯಂ ಕಾಂಪ್ಲೆಕ್ಸ್‌'ನಲ್ಲಿ ಪಿಎಂ ನರೇಂದ್ರ ಮೋದಿ ಉದ್ಘಾಟಿಸಿ ಮಾತನಾಡಿದರು. ಈ ವೇಳೆ ದೇಹವು ಫಿಟ್ ಆಗಿರುವಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಎಲ್ಲರಿಗೂ ಕ್ರೀಡಾ ದಿನದ ಶುಭಾಶಯಗಳು, ಇಂದು ನಾವು ಮೇಜರ್ ಧ್ಯಾನ್ ಚಂದ್ ಅವರಂತೆ ಉತ್ತಮ ಆಟಗಾರರನ್ನು ಪಡೆಯಬೇಕು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಬ್ಬ ವಿದ್ಯಾರ್ಥಿ ಇದ್ದಾನೆ ಎಂದು ತಮ್ಮ ಮಾತನ್ನು ಆರಂಭಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಫಿಟ್‌ನೆಸ್‌ ಕೇವಲ ಪದವಲ್ಲ, ಅದು ಆರೋಗ್ಯಕರ ಜೀವನದ ಸ್ಥಿತಿ ಎಂದು ಬಣ್ಣಿಸಿದರು. ಭಾರತದಲ್ಲಿ ಕಳೆದ ಐದು ವರ್ಷಗಳಲ್ಲಿ, ಕ್ರೀಡಾಕೂಟಕ್ಕಾಗಿ ರಚಿಸಲಾದ ವಾತಾವರಣದ ಪ್ರಯೋಜನವನ್ನು ನಾವು ನೋಡಿದ್ದೇವೆ. ಇದಕ್ಕಾಗಿ ಪ್ರತಿಯೊಬ್ಬರೂ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇದರ ವೀಡಿಯೊಗಳನ್ನು ತಯಾರಿಸಲು ಮತ್ತು ಅದನ್ನು ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ತೋರಿಸಲು ನಾನು ಬಯಸುತ್ತೇನೆ ಎಂದು ಅವರು ತಿಳಿಸಿದರು.

'ಫಿಟ್ ಇಂಡಿಯಾ ಆಂದೋಲನ'ದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಂದೇಶ:

- #FitIndiaMovement ಅನ್ನು ಸರ್ಕಾರ ಪ್ರಾರಂಭಿಸಿದ್ದರೂ ಅದನ್ನು ಮುನ್ನಡೆಸುವ ಜವಾಬ್ದಾರಿ ನಿಮ್ಮೆಲ್ಲರದ್ದು.  ದೇಶದ ಜನರು ಮಾತ್ರ ಈ ಅಭಿಯಾನವನ್ನು ಮುಂದಕ್ಕೆ ತೆಗೆದುಕೊಂಡು ಯಶಸ್ಸಿನ ಉತ್ತುಂಗವನ್ನು ತಲುಪುತ್ತಾರೆ: ಪ್ರಧಾನಿ ನರೇಂದ್ರ ಮೋದಿ

- ನಾವು ನಮ್ಮ ಫಿಟ್‌ನೆಸ್‌ ಪ್ರಯಾಣವನ್ನು ಪ್ರಾರಂಭಿಸಿದಾಗ, ನಾವು ನಮ್ಮ ದೇಹವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೇವೆ. ತಮ್ಮ ದೇಹದ ಶಕ್ತಿಯನ್ನು ಈ ರೀತಿ ತಿಳಿದಿರುವ ಅನೇಕ ಜನರನ್ನು ನಾನು ನೋಡಿದ್ದೇನೆ.

- ಫಿಟ್‌ನೆಸ್‌ ಜನರ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ, ಇದು ಉತ್ತಮ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಸಹಾಯಕ.

- ದೇಶದ ಜನರು ಈ ಅಭಿಯಾನವನ್ನು ಮುಂದುವರಿಸುತ್ತಾರೆ, ಇದು ಶೂನ್ಯ ಹೂಡಿಕೆಯನ್ನು ಹೊಂದಿದೆ, ಆದರೆ ಆದಾಯವು ಅಪರಿಮಿತವಾಗಿದೆ.

- ನೀವು ಯಾವುದೇ ವೃತ್ತಿಯಲ್ಲಿದ್ದರೆ, ನಿಮ್ಮ ವೃತ್ತಿಯಲ್ಲಿ ದಕ್ಷತೆಯನ್ನು ತರಬೇಕು, ಆಗ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಮುಖ್ಯ. ದೇಹವು ಫಿಟ್ ಆಗಿದ್ದರೆ ಮನಸ್ಸು ಹಿಟ್ ಆಗಿದೆ ಎಂದರ್ಥ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

- ಅದು ಬೋರ್ಡ್ ರೂಂ ಆಗಿರಲಿ, ಬಾಲಿವುಡ್ ಆಗಿರಲಿ, ಫಿಟ್ ಆಗಿರುವವರು ಆಕಾಶವನ್ನು ಮುಟ್ಟುತ್ತಾರೆ.

- ದೇಹವು ಫಿಟ್ ಆಗಿರುವಾಗ ಯಶಸ್ಸಿನ ಮೆಟ್ಟಿಲೇರಲು ಸಾಧ್ಯ.

ಇಂದು, ಇಡೀ ಜಗತ್ತಿನಲ್ಲಿ ಫಿಟ್‌ನೆಸ್ ಜಾಗೃತಿ ಹೆಚ್ಚಿಸಲು ದೊಡ್ಡ ಅಭಿಯಾನ ನಡೆಯುತ್ತಿದೆ: ಪ್ರಧಾನಿ ಮೋದಿ
- ಅಮೆರಿಕ, ಜರ್ಮನಿ ಮತ್ತು ಬ್ರಿಟನ್ ಕೂಡ ಜನರನ್ನು ತಮ್ಮ ಫಿಟ್‌ನೆಸ್ ಅಭಿಯಾನದೊಂದಿಗೆ ಸಂಪರ್ಕಿಸುವ ಅಭಿಯಾನವನ್ನು ಪ್ರಾರಂಭಿಸಿವೆ. ಚೀನಾ ಮತ್ತು ಆಸ್ಟ್ರೇಲಿಯಾಗಳು ತಮ್ಮ ನಾಗರಿಕರಿಗೆ ಫಿಟ್‌ನೆಸ್‌ಗಾಗಿ ಅರಿವು ಮೂಡಿಸಲು ಪ್ರಚಾರ ನಡೆಸುತ್ತಿವೆ. ಈ ದೇಶಗಳು ಇದನ್ನು ಏಕೆ ಮಾಡಿವೆ ಎಂದು ಯೋಚಿಸಿ, ಏಕೆಂದರೆ ದೇಶ ಜನರು ಫಿಟ್ ಆಗಿದ್ದರೆ ಆ ದೇಶ ಕೂಡ ಸದೃಢವಾಗಿರುವುದು ಎಂದು ಪ್ರಧಾನಿ ಮೋದಿ ಹೇಳಿದರು.

ಫಿಟ್ ಇಂಡಿಯಾ ಮೂವ್‌ಮೆಂಟ್ ಜೀವನಶೈಲಿಯನ್ನು ಬದಲಾಯಿಸುವ ಅಭಿಯಾನ, ಇದು ಸರ್ಕಾರದ ಅಭಿಯಾನವಲ್ಲ. ಇದರಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಭರವಸೆಯ ಕಿರಣವೂ ಇದೆ, ನಾವು ನಮ್ಮ ಜೀವನಶೈಲಿಯನ್ನು ಬದಲಾಯಿಸಬಹುದು ಮತ್ತು ಈ ಕಾಯಿಲೆಗಳಿಂದ ದೂರವಿರಬಹುದು ಎಂದು ಅವರು ತಿಳಿಸಿದರು.

ಕಿರಿಯ ವಯಸ್ಸಿನಲ್ಲಿ ಮಧುಮೇಹ, ಹೃದ್ರೋಗ ಸಮಸ್ಯೆಗೆ ಕಾರಣ ನಮ್ಮ ಜೀವನ ಶೈಲಿ:
ಇಂದು, ಕೆಲವು ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಮತ್ತು ಹೃದ್ರೋಗದ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಇದಕ್ಕೆಲ್ಲಾ ನಾಮ್ಮ ಜೀವನಶೈಲಿಯೇ ಕಾರಣ. ನಾವು ದಪ್ಪ ಆಗಿದ್ದೇವೆ ಎಂದೊಡನೆ ಫಿಟ್ನೆಸ್ ಕಿಟ್ ಖರೀದಿಸುತ್ತೇವೆ. ಆದರೆ ಆದನ್ನು ಖರೀದಿಸುವಾಗ ಇರುವ ಉತ್ಸಾಹ ಕೆಲ ದಿನಗಳ ನಂತರ ಮಾಯವಾಗುತ್ತದೆ. ಆಗ ಫಿಟ್ನೆಸ್ ಕಿಟ್ ಮನೆಯ ಯಾವುದೋ ಒಂದು ಮೂಲೆ ಸೇರಿಸುತ್ತದೆ ಎಂದು ಪ್ರಸ್ತುತ ಜನರ ಮನಸ್ಥಿತಿಯನ್ನು ಪ್ರಧಾನಿ ಮೋದಿ ಬಣ್ಣಿಸಿದರು.

ಇಂದು, ತಂತ್ರಜ್ಞಾನವು ಮಾತ್ರ ನಾವು ಎಷ್ಟು ನಡೆಯುತ್ತೇವೆ ಎಂದು ಹೇಳುತ್ತದೆ ಎಂದ ಪ್ರಧಾನಿ ಮೋದಿ, ಕೆಲವು ದಶಕಗಳ ಹಿಂದೆ, ಒಬ್ಬ ಸಾಮಾನ್ಯ ವ್ಯಕ್ತಿಯು ಹಲವು ಕಿಲೋಮೀಟರ್ ಗಳಷ್ಟು ದೂರ ನಡೆಯುತ್ತಿದ್ದನು. ಬಸ್ ಹಿಡಿಯಲು ಓಡುತ್ತಿದ್ದನು, ಆದರೆ ತಂತ್ರಜ್ಞಾನದಿಂದಾಗಿ ನಮ್ಮ ನಡೆಯುವ ಅಭ್ಯಾಸ ದಿನೇ ದಿನೇ ಕಡಿಮೆಯಾಗುತ್ತಿದೆ.- ಫಿಟ್‌ನೆಸ್ ನಮ್ಮ ಜೀವನದ ಒಂದು ಸ್ವಾಭಾವಿಕ ಭಾಗವಾಗಿದೆ, ಆದರೆ ಇದು ಕಾಲಾನಂತರದಲ್ಲಿ ಅಸಡ್ಡೆ ತೋರಿ, ಹಲವು ಕಾಯಿಲೆಗಳಿಗೆ ನಾವೇ ಆಹ್ವಾನ ನೀಡುತ್ತಿರುವುದಂತೂ ನಿಜ ಎಂದು ವಿಷಾದ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಉಪಸ್ಥಿತರಿದ್ದರು. ಅಷ್ಟೇ ಅಲ್ಲದೆ ಕಾರ್ಯಕ್ರಮದಲ್ಲಿ ಕ್ರೀಡಾ ಮತ್ತು ಮನರಂಜನಾ ಜಗತ್ತಿನ ಅನೇಕ ಗಣ್ಯರು ಉಪಸ್ಥಿತರಿದ್ದರು.

'ಫಿಟ್ ಇಂಡಿಯಾ ಆಂದೋಲನ'ದಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಕರೆ ನೀಡಿದ್ದರು.

Trending News