ನವದೆಹಲಿ: ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ ನಿನ್ನೆ ನಡೆದ ಮಾತುಕತೆ ವಿಫಲವಾಗಿದ್ದು, ದೆಹಲಿ ಗಡಿಯಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಇದರಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟವಾಧಿ ಧರಣಿ 7ನೇ ದಿನಕ್ಕೆ ಕಾಲಿಟ್ಟಿದೆ.
ನಿನ್ನೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ (Narendra Singh Tomar), ಪಿಯೂಷ್ ಗೋಯಲ್, ಕಿರಿಯ ಕೈಗಾರಿಕಾ ಸಚಿವ ಸೋಮ್ ಪ್ರಕಾಶ್ ಹಾಗೂ ರೈತ ಸಂಘಟನೆಗಳ 35 ಮಂದಿ ಪ್ರತಿನಿಧಿಗಳ ನಡುವೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆದಿತ್ತು. ಆದರೆ ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಜೊತೆಗೆ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂಬ ರೈತರ ಹಕ್ಕೊತ್ತಾಯವನ್ನು ಕೇಂದ್ರ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಇನ್ನೊಂದೆಡೆ ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಸಚಿವತ್ರಯರ ಪ್ರಸ್ತಾಪವನ್ನು ರೈತರು (Farmers) ಒಪ್ಪಿಕೊಳ್ಳಲಿಲ್ಲ. ಹಾಗಾಗಿ ನಿನ್ನೆ ಮಾತುಕತೆ ಮುರಿದುಬಿದ್ದಿತ್ತು.
ರೈತರ ಬೇಡಿಕೆಗೆ ಒಪ್ಪದ ಕೇಂದ್ರ ಸರ್ಕಾರ, ಸಂಧಾನ ವಿಫಲ
ಸಭೆ ವಿಫಲವಾದ್ದರಿಂದ ಸಭೆಯಿಂದ ಹೊರಗೆ ಬಂದ ರೈತ ಮುಖಂಡರು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಮುಂದುವರೆಸುವುದಾಗಿ ಘೋಷಿಸಿದರು. ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ತಮ್ಮ ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ರೈತ ಮುಖಂಡರು ಖಡಕ್ಕಾಗಿ ತಿಳಿಸಿದ್ದಾರೆ.
ಕೃಷಿ ಕಾನೂನುಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ವಿಂಗಡಿಸಿ ಚರ್ಚಿಸಲು ಸಮಿತಿಯೊಂದನ್ನು ರಚಿಸುವ ಜೊತೆಗೆ ಕನಿಷ್ಠ ಬೆಂಬಲ ಬೆಲೆ (MSP) ಮತ್ತು ಎಪಿಎಂಸಿ ಮಂಡಿಗಳ ಬಗೆಗಿನ ಕಳವಳವನ್ನು ಹೋಗಲಾಡಿಸಲು ಪ್ರಯತ್ನಿಸುವುದಾಗಿ ಕೇಂದ್ರ ಸರ್ಕಾರದ ಪರವಾಗಿ ಸಚಿವರು ಭರವಸೆ ನೀಡಿದರು. ಆದರೆ ರೈತರ ಪ್ರತಿನಿಧಿಗಳು ರೈತರ ಪಾಲಿಗೆ ಮರಣಶಾಸನವಾಗಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯಬೇಕು. ಜೊತೆಗೆ ರೈತ ಬೆಳೆಯುವ ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನು ಜಾರಿಗೊಳಿಸಬೇಕು ಎಂಬ ಮೂಲ ಬೇಡಿಕೆ ಈಡೇರಿಸಲೇಬೇಕು ಎಂದು ಒತ್ತಾಯಿಸಿದರು ಎನ್ನಲಾಗಿದೆ.
Farmers Protest: ನಾವು ಸಹ ರೈತರೊಂದಿಗೆ ಇದ್ದೇವೆ, ರೈತರನ್ನು ಬೆಂಬಲಿಸಿದ ಟ್ಯಾಕ್ಸಿ ಯೂನಿಯನ್
ನಿನ್ನೆ ನಡೆದ ಸಭೆಗೆ ದೆಹಲಿ ಚಲೋ (Dilli Chalo) ದ ಏಳು ಸದಸ್ಯರ ರೈತರ ಸಮಿತಿಯ ಭಾಗವಾಗಿದ್ದ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ (Yogendra Yadav) ಹಾಜರಾಗುವ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಸಭೆಯಲ್ಲಿ ರಾಜಕೀಯ ಕಾರ್ಯಕರ್ತರು ಇರಬಾರದು ಎಂದು ಹೇಳಿತ್ತು. 'ನನ್ನಿಂದ ಮಾತುಕತೆಗೆ ಅಡ್ಡಿಯಾಗುವುದಾದರೆ ತಾನು ಹಾಜರಾಗುವುದಿಲ್ಲ. ಒಟ್ಟಿನಲ್ಲಿ ರೈತರು ಯಶಸ್ಸು ಕಾಣಬೇಕಷ್ಟೇ' ಎಂದು ಯೋಗೇಂದ್ರ ಯಾದವ್ ಹೇಳಿದ್ದರು.
ಸದ್ಯ ಸಿಂಘು, ಬುರಾರಿ ಮತ್ತಿತರ ಕಡೆ ಗಡಿಯಲ್ಲಿರುವ ರೈತರು ಪ್ರತಿಭಟನೆ (Farmers Protest) ಮುಂದುವರೆಸಿದ್ದು, ನಾಳೆ (ಡಿಸೆಂಬರ್ 3) ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಮತ್ತೊಂದು ಸುತ್ತಿನ ಮಾತಕತೆ ನಡೆಯಲಿದೆ. ಈಗಾಗಲೇ ರೈತರು ಹಾಗೂ ಕೇಂದ್ರ ಸರ್ಕಾರದ ನಡುವೆ 3 ಸುತ್ತಿನ ಮಾತುಕತೆ ಆಗಿ ಎಲ್ಲವೂ ವಿಫಲವಾಗಿವೆ. ನಾಳೆ ನಡೆಯುವ ಸಭೆಯೂ ವಿಫಲವಾದರೆ ಮಹಾರಾಷ್ಟ್ರದಿಂದ ದೆಹಲಿಗೆ ರೈತರು ಮೆರವಣಿಗೆ ಪ್ರಾರಂಭಿಸುವುದಾಗಿ ಮಹಾರಾಷ್ಟ್ರ ರೈತ ಗುಂಪುಗಳು ಕೇಂದ್ರಕ್ಕೆ ಎಚ್ಚರಿಕೆ ನೀಡಿವೆ. ಇದರಿಂದ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.