ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಜೀವನಾಧಾರಿತ 'ಪಿಎಂ ನರೇಂದ್ರ ಮೋದಿ' ಚಿತ್ರದ ನಿರ್ಮಾಪಕರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿದೆ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪ್ರೇರಿತ ಚಿತ್ರವಾದ 'ಪಿಎಂ ನರೇಂದ್ರ ಮೋದಿ' ಚಿತ್ರ ಬಿಡುಗಡೆಗೆ ಅನುಮತಿ ಹೇಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಮತ್ತು ಸಿಪಿಎಂ ಪಕ್ಷಗಳು ಪ್ರಶ್ನಿಸಿದ್ದವು. ಈ ಬೆನ್ನಲ್ಲೇ 'ಪಿಎಂ ನರೇಂದ್ರ ಮೋದಿ' ಚಿತ್ರದ ನಿರ್ಮಾಪಕರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ, ಚಲನಚಿತ್ರವು ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದು, ಈ ಬಗ್ಗೆ ಉತ್ತರ ನೀಡುವಂತೆ ಚಿತ್ರದ ನಿರ್ಮಾಪಕರಾದ ಸುರೇಶ್ ಒಬೆರಾಯ್, ಸಂದಿಪ್ ಸಿಂಗ್, ಆನಂದ್ ಪಂಡಿತ್ ಮತ್ತು ಆಚಾರ್ಯ ಮನೀಶ್ ಅವರಿಗೆ ಮಾರ್ಚ್ 30ರ ವರೆಗೆ ಅವಕಾಶ ನೀಡಲಾಗಿದೆ.
ಚಿತ್ರದಲ್ಲಿ ನರೇಂದ್ರ ಮೋದಿ ಪಾತ್ರದಲ್ಲಿ ನಟ ವಿವೇಕ್ ಒಬೆರಾಯ್ ಅಭಿನಯಿಸಿದ್ದು, ಕಳೆದ ವಾರವಷ್ಟೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ನರೇಂದ್ರ ಮೋದಿ ಅವರ ಬಾಲ್ಯ, ರಾಜಕೀಯ ಪ್ರವೇಶ, ವೈಯಕ್ತಿಕ ಜೀವನದ ಬಗ್ಗೆ ಎಳೆ ಎಳೆಯಾಗಿ ಚಿತ್ರದಲ್ಲಿ ತೋರಿಸಲಾಗಿದೆ ಎನ್ನಲಾಗಿದ್ದು, ನಟರಾದ ಬೋಮಾನ್ ಇರಾನಿ, ಮನೋಜ್ ಜೋಶಿ ಹಾಗೂ ಝರೀನಾ ವಹಾನ್ ಸೇರಿದಂತೆ ಪ್ರಮುಖರು ತಾರಾಗಣದಲ್ಲಿದ್ದಾರೆ.