ನವದೆಹಲಿ: ದೇಶಾದ್ಯಂತ ವ್ಯಾಪಾರ ಮಾಡುವಲ್ಲಿ ಸರಳತೆಯನ್ನು ಉತ್ತೇಜಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರಿ ಘೋಷಣೆಯೊಂದನ್ನು ಮಾಡಿದ್ದಾರೆ. ಹೌದು, ಮುಂದಿನ ಒಂದು ವರ್ಷದ ಅವಧಿಗೆ ಯಾವುದೇ ನೂತನ ದಿವಾಳಿತನದ ಪ್ರಕ್ರಿಯೆಯನ್ನು ನಡೆಸಲಾಗುವುದಿಲ್ಲ ಎಂದು ಹಣಕಾಸು ಸಚಿವರು ಹೇಳಿದ್ದಾರೆ. ಅಂದರೆ, ದಿವಾಳಿತನ ಪ್ರಕ್ರಿಯೆಯನ್ನು ಇಂದಿನಿಂದ ಒಂದು ವರ್ಷಗಳ ಅವಧಿಗಾಗಿ ಸಂಪೂರ್ಣ ಸ್ಥಗಿತಗೊಳಿಸಲಾಗಿದೆ. ಇದರಿಂದ MSME ವಲಯದ ಕಂಪನಿಗಳಿಗೆ ಭಾರಿ ಲಾಭವಾಗಲಿದ್ದು, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳಿಗಾಗಿ ವಿಶೇಷ ದಿವಾಳಿಯ ಕಾರ್ಯವಿಧಾನವನ್ನು ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕನಿಷ್ಠ ಕಟಬಾಕಿ ಮಿತಿಯನ್ನು 1 ಲಕ್ಷ ರೂ.ದಿಂದ 1 ಕೋಟಿ ರೂ.ಗೆ ಹೆಚ್ಚಳ
ಇದಕ್ಕೂ ಮೊದಲು ಯಾವುದೇ ಒಂದು ಕಂಪನಿಯ ವಿರುದ್ಧ ದಿವಾಳಿತನ ಪ್ರಕ್ರಿಯೆ ಪ್ರಾರಂಭಿಸಲು ಕನಿಷ್ಠ ಕಟಬಾಕಿ ಮೊತ್ತವನ್ನು 1 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು 1 ಕೋಟಿ.ರೂಗೆ ಹೆಚ್ಚಿಸಲಾಗುವುದು ಎಂದು ವಿತ್ತ ಸಚಿವರು ಘೋಷಿಸಿದ್ದಾರೆ. ಕಳೆದ 50 ಕ್ಕೂ ಹೆಚ್ಚು ದಿನಗಳಿಂದ ಕೊರೊನಾ ಪ್ರಕೋಪದ ಹಿನ್ನೆಲೆ ದೇಶಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಇದು ಕಂಪನಿಗಳ ಆರ್ಥಿಕ ವ್ಯವಹಾರದ ಮೇಲೆ ಭಾರಿ ಪರಿಣಾಮ ಬೀರಿದೆ. ಇಂತಹ ಪರಿಸ್ಥಿತಿಯಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಕಂಪನಿಗಳಿಗೆ ಈ ನಿರ್ಣಯದಿಂದ ಪರಿಹಾರ ಸಿಗಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.
ಡಿಕ್ರಿಮಿನಲೈಸೆಶನ್ ಕುರಿತು ವಿತ್ತ ಸಚಿವರು ಹೇಳಿದ್ದೇನು?
ಈ ಕುರಿತು ಹೇಳಿಕೆ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕಂಪನಿ ಕಾಯ್ದೆಯ ಅಡಿ ಕಂಪನಿಗಳಿಗೆ ಡಿಕ್ರಿಮಿನಲೈಸೆಶನ್ ಪ್ರಯೋಜನೆಯನ್ನು ನೀಡಲಾಗುವುದ. ಕಾರ್ಯವಿಧಾನದ ಸಣ್ಣ-ಪುಟ್ಟ ತಪ್ಪುಗಳನ್ನು ಹಾಗೂ ತಾಂತ್ರಿಕ ದೋಷದಿಂದ ಉಂಟಾಗಿರುವ ತಪ್ಪುಗಳನ್ನು ಅಪರಾಧಿ ಮೊಕದ್ದಮೆಗಳನ್ನಾಗಿ ಪರಿಗಣಿಸಲಾಗುವುದಿಲ್ಲ. ಇಂತಹ ಒಟ್ಟು 7 ಸಂಯುಕ್ತ ಅಪಾರಾಧಗಳ ಪಟ್ಟಿಯಿಂದ ಅವುಗಳನ್ನು ಹೊರಗಿಡಲಾಗುವುದು. ಅಷ್ಟೇ ಅಲ್ಲ ಸಣ್ಣ ಸಣ್ಣ ನಿಯಮ ಉಲ್ಲಂಘನೆಗಳ ಕಾರಣ ಕಂಪನಿಗಳನ್ನು ಕ್ರಿಮಿನಲ್ ಪ್ರಕರಣಗಳಿಗೆ ಎಳೆಯಲಾಗುವುದಿಲ್ಲ ಮತ್ತು ಇದು ವ್ಯಾಪಾರ ಪ್ರಕ್ರಿಯೆಯನ್ನು ಇನ್ನಷ್ಟು ಸುಲಭಗೊಳಿಸಲಿದೆ ಎಂದು ವಿತ್ತ ಸಚಿವರು ಹೇಳಿದ್ದಾರೆ.
ಕೊವಿಡ್-19ಗ ಸಂಬಂಧಿಸಿದ ಸಾಲಗಳನ್ನು ಡಿಫಾಲ್ಟ್ ಪಟ್ಟಿಗೆ ಎಂದು ಪರಿಗಣಿಸಲಾಗುವುದಿಲ್ಲ
ಅಷ್ಟೇ ಅಲ್ಲ ದಿವಾಳಿತನ ಮತ್ತು ದಿವಾಳಿತನ ಸಂಹಿತೆ (ಐಬಿಸಿ) ಅಡಿಯಲ್ಲಿ, ಕೋವಿಡ್ -19 ಗೆ ಸಂಬಂಧಿಸಿದ ಸಾಲಗಳನ್ನು 'ಡೀಫಾಲ್ಟ್' ಎಂದು ವರ್ಗೀಕರಿಸಲಾಗುವುದಿಲ್ಲ. ದಿವಾಳಿತನಕ್ಕಾಗಿ ಸಲ್ಲಿಸದ ಕಂಪನಿಗಳಿಗೆ ಇದು ಪರಿಹಾರ ನೀಡಲಿದೆ.