ಕೋಥಮಂಗಲಂ: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕೇರಳದ ಚರ್ಚ್ ಒಂದು ನೂರಾರು ಮುಸಲ್ಮಾನರಿಗೆ ನಮಾಜ್ ಸಲ್ಲಿಸಲು ತನ್ನ ಚರ್ಚ್ ಬಾಗಿಲು ತೆರೆದು ತನ್ನ ಆವರಣದಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ಮಾಡಿಕೊಡುವ ಮೂಲಕ ಕೋಮು ಸೌಹಾರ್ದತೆಯನ್ನು ಮೆರೆದಿದೆ.
ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿ ವಿರುದ್ಧ ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ನ ಕೇರಳ ಆಯೋಜಿಸಿದ್ದ ‘ಜಾತ್ಯತೀತ ಯುವ ಮಾರ್ಚ್’ ನಲ್ಲಿ ಶನಿವಾರ ಮುಸ್ಲಿಮರು ಸೇರಿದಂತೆ ಜನರ ಗುಂಪು ಭಾಗವಹಿಸುತ್ತಿತ್ತು.
ಮೆರವಣಿಗೆ ಕೊನೆಗೊಂಡಾಗ, ನಮಾಜ್ ಸಲ್ಲಿಸಲು ಸಮಯವಾಗಿತ್ತು. ಈ ಸಂದರ್ಭದಲ್ಲಿ ಸೇಂಟ್ ಥಾಮಸ್ ಚರ್ಚ್, ಕೊಥಮಂಗಲಂ (ಮಾರ್ ಥೋಮಾ ಚೆರಿಯಾಪಲ್ಲಿ) ತನ್ನ ಕ್ಯಾಂಪಸ್ ಅನ್ನು ತೆರೆದಾಗ ಅಲ್ಲಿ ನೂರಾರು ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.
ಅಷ್ಟೇ ಅಲ್ಲ, ಮೆರವಣಿಗೆಯ ಭಾಗವಾಗಿದ್ದ ಐಯುಎಂಎಲ್ ನಾಯಕ ಸಯ್ಯಿದ್ ಮುನವ್ವರ್ ಅಲಿ ತಂಗಲ್ ಅವರಿಗೆ ವುಧು (ಪ್ರಾರ್ಥನೆಗೆ ಮುಂಚಿತವಾಗಿ ಮುಸ್ಲಿಮರು ನಡೆಸುವ ಧಾರ್ಮಿಕ ನಡೆ) ಮಾಡಲು ಪಾದ್ರಿಯೇ ನೀರು ನೀಡಿದರು.
“ಮಸೀದಿಗೆ ಹೋಗುವುದರಿಂದ ನಮಾಜ್ ವಿಳಂಬವಾಗುತ್ತಿತ್ತು. ಆದ್ದರಿಂದ ಮುಸ್ಲಿಮರಿಗೆ ಅಲ್ಲಿ ನಮಾಜ್ ಮಾಡಲು ಅನುಮತಿ ನೀಡುವಂತೆ ನಾವು ಚರ್ಚ್ ಅಧಿಕಾರಿಗಳಿಗೆ ವಿನಂತಿಸಿದ್ದೇವೆ. ಮಗ್ರಿಬ್ ಪ್ರಾರ್ಥನೆಗಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡಲು ಅವರು ಅವಕಾಶ ಮಾಡಿಕೊಟ್ಟರು”ಎಂದು ಎಐಪಿಸಿ ರಾಜ್ಯ ಅಧ್ಯಕ್ಷ ಮ್ಯಾಥ್ಯೂ ಕುಜಾಲ್ನಾಡನ್ ಹೇಳಿದರು.
ಎನ್‌ಆರ್‌ಸಿ ವಿರುದ್ಧ ದನಿ ಎತ್ತಿದ ಮೊದಲ ರಾಜ್ಯಗಳಲ್ಲಿ ಕೇರಳವೂ ಒಂದು. ಸಿಎಎ ಮತ್ತು ಎನ್‌ಆರ್‌ಸಿ ಎರಡನ್ನೂ ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಕೇರಳ ಹೇಳಿದೆ.