ನವದೆಹಲಿ: ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಗೆ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ನೀಡುವ ಸ್ಥಳಗಳಲ್ಲಿ ಪ್ರಮುಖವಾಗಿದೆ. ಆದರೆ ಈಗ ಆ ಸ್ಥಾನದಲ್ಲಿ ಭಾರತದ ಸ್ಲಂ ಪ್ರದೇಶವು ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
ಹೌದು, ಈ ಸಂಗತಿ ಈಗ ನಿಮಗೆ ಅಚ್ಚರಿಯಾದರೂ ಕೂಡ ಸತ್ಯ. ಈಗ ತಾಜ್ ಮಹಲ್ ಸ್ಥಾನದಲ್ಲಿ ಏಷ್ಯಾದ ಅತಿದೊಡ್ಡ ಕೊಳೆಗೇರಿ ಎಂದು ಕರೆಸಿಕೊಳ್ಳುವ ಮುಂಬೈ ನ ಧರವಿ ಪ್ರದೇಶ ಭಾರತಕ್ಕೆ ಬರುವ ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ವಿಶ್ವದ ಅತಿದೊಡ್ಡ ಟ್ರಾವೆಲ್ ಸೈಟ್ ಎಂದು ಕರೆಸಿಕೊಳ್ಳುವ ಟ್ರಿಪ್ ಅಡ್ವೈಸರ್ ಈ ಕುತೂಹಲಕರ ಸಂಗತಿಯನ್ನು ಬಹಿರಂಗಪಡಿಸಿದೆ. ಭಾರತಕ್ಕೆ ಬರುವ ಅಂತರರಾಷ್ಟ್ರೀಯ ಪ್ರವಾಸಿಗರು ಧಾರವಿ ಯಲ್ಲಿರುವ ಕೊಳೆಗೇರಿಗಳನ್ನು ನೋಡಲು ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಅದು ತಿಳಿಸಿದೆ. ಪ್ರಮುಖವಾಗಿ ಇಲ್ಲಿನ ಕೊಳಗೇರಿಯಲ್ಲಿ ವಾಸಿಸುವ ನಿವಾಸಿಗಳ ಜೀವನದ ಬಗ್ಗೆ ತಿಳಿದುಕೊಳ್ಳವ ಕುತೂಹಲ ಪ್ರವಾಸಿಗರದ್ದಾಗಿರುತ್ತದೆ ಎಂದು ಅದು ಹೇಳಿದೆ.
ಕುಂಬಾರಿಕೆ ಕುಶಲಕರ್ಮಿಗಳನ್ನು ಪ್ರದರ್ಶಿಸುವ ಕೊಳೆಗೇರಿಗಳ ವ್ಯಾಪಾರ ಕೇಂದ್ರ, ಹಾಗೂ ಚರ್ಮದ ಅಂಗಡಿಗಳನ್ನು ನೋಡಲು ವಿದೇಶಿ ಪ್ರವಾಸಿಗಳು ಹೆಚ್ಚಿನ ಆದ್ಯತೆ ನೀಡುತ್ತಾರೆ ಎನ್ನಲಾಗಿದೆ. ವಿಶೇಷವೆಂದರೆ ಈ ಪ್ರವಾಸವು ಎಷ್ಟು ಜನಪ್ರಿಯವೆಂದರೆ ಈ ಹಿಂದೆ ಬೈಕ್ ನಲ್ಲಿ ಹಳೆ ದೆಹಲಿಯನ್ನು ಸುತ್ತುತ್ತಿದ್ದ ಪ್ರವಾಸಿಗರಿಗಿಂತ ಅಧಿಕ ಜನರು ಇಲ್ಲಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ. ಆ ಮೂಲಕ ‘ಟ್ರಾವೆಲ್ಲರ್ಸ್ ಚಾಯ್ಸ್ ಎಕ್ಸ್ಪೀರಿಯನ್ಸ್ 2019 - ಇಂಡಿಯಾ’ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದಿದೆ ಎಂದು ಟ್ರಿಪ್ ಅಡ್ವೈಸರ್ ವರದಿ ಮಾಡಿದೆ.
ಈಗ ಪ್ರವಾಸಿಗರ ಈ ಅಂಕಿ ಅಂಶಗಳನ್ನು ಕಂಪ್ಯೂಟರ್ ಆಧಾರಿತ ಅಲ್ಗಾರಿದಮ್ ಮೂಲಕ ಕಂಡು ಹಿಡಿಯಲಾಗಿದೆ. ಇದರಲ್ಲಿ ತಾಜ್ ಮಹಲ್ ಗಿಂತ ಹೆಚ್ಚು ಧಾರವಿಗೆ ಪ್ರವಾಸಿಗರು ಭೇಟಿ ನೀಡಿದ್ದಾರೆ ಎನ್ನಲಾಗಿದೆ. ವಾರ್ಷಿಕವಾಗಿ 7 ರಿಂದ 8 ಮಿಲಿಯನ್ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಾರೆ. ಆಸ್ಕರ್ ಪ್ರಶಸ್ತಿ ವಿಜೇತ ಸ್ಲಮ್ಡಾಗ್ ಮಿಲಿಯನೇರ್ ಚಿತ್ರದ ಮೂಲಕ ಧಾರವಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು ಎನ್ನಲಾಗಿದೆ.