ನವದೆಹಲಿ: ಲೋಕೋಪಯೋಗಿ ಇಲಾಖೆ ಹಗರಣಕ್ಕೆ ಸಂಬಂಧಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಸಂಬಂಧಿಯನ್ನು ಎಸಿಬಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಅವರ ಸೋದರ ಸಂಬಂಧಿ ಸುರೇಂದರ್ ಬನ್ಸಾಲ್ ಅವರ ಮಗ ವಿನಯ್ ಬನ್ಸಾಲ್ ಅವರನ್ನು ಅಕ್ರಮವಾಗಿ ರಸ್ತೆ ಕಾಮಗಾರಿ ಯೋಜನೆ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದಾಗಿ ವಿಶೇಷ ಪೋಲಿಸ್ ಕಮಿಷನರ್ ಅರವಿಂದ್ ದೀಪ್ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಮೂರು ಎಫ್ ಐಆರ್ ದಾಖಲಾಗಿದ್ದು, ರೇಣು ಕನ್ಸ್ ಸ್ಟ್ರಕ್ಷನ್ ಸಂಸ್ಥೆಯ ಮಾಲೀಕರಾದ ಸುರೇಂದರ್ ಬನ್ಸಾಲ್, ಸಹ ಮಾಲೀಕರಾದ ಕಮಲ್ ಸಿಂಗ್, ಪವನ್ ಕುಮಾರ್ ಅವರ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಭ್ರಷ್ಟಾಚಾರ ವಿರೋಧಿ ಸಂಸ್ಥೆ (RACO) ಸ್ಥಾಪಕ ರಾಹುಲ್ ಶರ್ಮಾ ಅವರು ಕೇಜ್ರಿವಾಲ್ ಸಂಪುಟದ ಲೋಕೋಪಯೋಗಿ ಸಚಿವ ಸತ್ಯೇಂದರ್ ಜೈನ್ ತಮ್ಮ ಕಚೇರಿಯನ್ನು ದುರ್ಬಳಕೆ ಮಾಡಿಕೊಂಡು ಬನ್ಸಾಲ್ ಒಡೆತನದ ಸಂಸ್ಥೆಗೆ ಅಕ್ರಮವಾಗಿ ಕಾಮಗಾರಿ ಗುತ್ತಿಗೆ ನೀಡಿದ್ದಾರೆ ಎಂದು ಎಸಿಬಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಕೀಜ್ರಿವಾಲ್ ಸಂಬಂಧಿಯನ್ನು ಬಂಧಿಸಿದ್ದಾರೆ.