ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯು ದೇಶದ ಪ್ರತಿಷ್ಠಿತ ಚಂದ್ರ ಮಿಷನ್, ಚಂದ್ರಯಾನ್ -2 ಉಡಾವಣೆಗೆ ಕ್ಷಣಗಣನೆ ಪ್ರಾರಂಭಿಸಿದೆ.
ಜುಲೈ 15 ರಂದು ಮುಂಜಾನೆ 2:51ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಹೆವಿ-ಲಿಫ್ಟ್ ಬಾಹುಬಲಿ ರಾಕೆಟ್ ಜಿಎಸ್ಎಲ್ ವಿ-ಮಾರ್ಕ್ IIIನಲ್ಲಿ ಚಂದ್ರಯಾನ್-2 ಉಡಾವಣೆಯಾಗಲಿದ್ದು, ರೋವರ್, ಲ್ಯಾಂಡರ್ ಹೊತ್ತು ಚಂದ್ರನತ್ತ ಚಿಮ್ಮಲಿದೆ. ಸೆಪ್ಟೆಂಬರ್ 6 ರಂದು ಚಂದ್ರನಲ್ಲಿ ಲ್ಯಾಂಡರ್ ಇಳಿಯಲಿದೆ. ಭಾನುವಾರ ಬೆಳಿಗ್ಗೆ 6:51ರಿಂದ ಚಂದ್ರಯಾನ್ -2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ ಎಂದು ಇಸ್ರೋದ ಟ್ವೀಟ್ ಮಾಹಿತಿ ನೀಡಿದೆ.
🇮🇳#ISROMissions🇮🇳
The launch countdown of #GSLVMkIII-M1/#Chandrayaan-2 commenced today at 0651 Hrs IST. The launch is scheduled at 0251Hrs IST on July 15th.
More updates to follow...— ISRO (@isro) July 14, 2019
2008ರಲ್ಲಿ ಪ್ರಾರಂಭವಾದ ಇಸ್ರೋದ ಚಂದ್ರಯಾನ್-1 ರ ಅನುಸರಣೆಯಾದ ಚಂದ್ರಯಾನ್-2 ಚಂದ್ರನ ಮೂಲ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳುವ ಬಗ್ಗೆ ವಿವರವಾದ ಅಧ್ಯಯನವನ್ನು ಕೈಗೊಳ್ಳುವ ಗುರಿ ಹೊಂದಿದೆ.
ಕಾಂಚೀಪುರಂನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ ಡಿಸೈನ್ ಅಂಡ್ ಮ್ಯಾನ್ಯೂಫ್ಯಾಕ್ಚರಿಂಗ್(ಐಐಐಟಿಡಿಎಂ)ನ ಏಳನೇ ಸಮಾವೇಶದಲ್ಲಿ, ಚಂದ್ರನ ಕಕ್ಷೆಯನ್ನು ಪರಿಭ್ರಮಿಸುವ ವಿಕ್ರಮ ಗಂಟೆಗೆ 6,000 ಕಿಲೋಮೀಟರ್ ಹಾದುಹೋಗುತ್ತದೆ. ಚಂದ್ರನನ್ನು ಪರಿಭ್ರಮಿಸುತ್ತಲೇ ತನ್ನ ಸಾಮರ್ಥ್ಯವನ್ನು ಹೆಚ್ಚು ಮತ್ತು ಕಡಿಮೆ ಮಾಡಿಕೊಳ್ಳುವ ಕ್ಷಮತೆ ಹೊಂದಿದೆ. ಅಲ್ಲದೆ, ಇದು ಚಂದ್ರನ ಪರಿಚಯವಿಲ್ಲದ ಪ್ರದೇಶದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಾಜಿ ಮುಖ್ಯಸ್ಥ ರಾಧಾಕೃಷ್ಣನ್ ಶನಿವಾರ ಹೇಳಿದ್ದಾರೆ.
ಚಂದ್ರಯಾನ 2 ಉಪಗ್ರಹ 3,850 ಕೆ.ಜಿ. ತೂಕ ಹೊಂದಿದ್ದು, ಆರ್ಬಿಟರ್ ತೂಕ 2,379, ಲ್ಯಾಂಡರ್ 1,471 ಕೆ.ಜಿ., ರೋವರ್ 27 ಕೆ.ಜಿ. ಹೊಂದಿವೆ. ಸುಮಾರು 978 ಕೋಟಿ ರೂ. ವೆಚ್ಚದಲ್ಲಿ ಚಂದ್ರಯಾನ-2 ಯೋಜನೆ ಸಿದ್ಧಗೊಂಡಿದ್ದು, ಉಪಗ್ರಹಕ್ಕೆ 603 ಕೋಟಿ ರೂ., ರಾಕೆಟ್‍ಗೆ 375 ಕೋಟಿ ರೂ. ವೆಚ್ಚವಾಗಿದೆ. 3 ಹಂತದ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್‍ನಲ್ಲಿ ಈ ಉಪಗ್ರಹ ಉಡಾವಣೆಯಾಗಲಿದ್ದು, ಶೇ.32 ರಷ್ಟು ಮಹಿಳಾ ವಿಜ್ಞಾನಿಗಳು ಭಾಗಿಯಾಗಿದ್ದಾರೆ ಎಂಬುದು ವಿಶೇಷ.