ನವದೆಹಲಿ: ಟಾಟಾ, ಅಂಬಾನಿ, ಅಡಾನಿ ಬಳಿಕ ಇದೀಗ ವಿಪ್ರೋ ಕೂಡ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನ ಖಜಾನೆಯನ್ನು ತೆರೆದಿದೆ. ವಿಪ್ರೋ ಲಿಮಿಟೆಡ್, ವಿಪ್ರೋ ಎಂಟರ್ಪ್ರೈಸಸ್ ಲಿಮಿಟೆಡ್ ಹಾಗೂ ಅಮೀಮ್ ಪ್ರೇಮ್ಜಿ ಫೌಂಡೇಶನ್ ಗಳು ಕೊರೊನಾ ವೈರಸ್ ವಿರುದ್ಧ ದೇಶದಲ್ಲಿ ಜಾರಿಯಲ್ಲಿರುವ ಅಭಿಯಾನಕ್ಕೆ 1,125 ಕೋಟಿ ರೂ. ಪರಿಹಾರ ನೀಡುವುದಾಗಿ ಘೋಷಿಸಿವೆ. ಬುಧವಾರ ಜಾರಿಗೊಳಿಸಿರುವ ಒಂದು ಪ್ರಕಟಣೆಯಲ್ಲಿ ಕಂಪನಿ ಈ ಕುರಿತು ಘೋಷಣೆ ಮಾಡಿ ಮಾಹಿತಿ ನೀಡಿದೆ. ಇದರಿಂದ ಸೋಂಕಿನ ಜೊತೆಗೆ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವ ಆರೋಗ್ಯ ಸೇವೆ ನೀಡುವವರಿಗೆ ಸಹಾಯವಾಗಲಿದೆ ಎಂದು ಹೇಳಿದೆ.
ಈ ಕುರಿತು ತನ್ನ ಸಂಯುಕ್ತ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವ ಕಂಪನಿ, ವಿಪ್ರೋ ಲಿಮಿಟೆಡ್ ವತಿಯಂದ 100 ಕೋಟಿ ರೂ. ನೀಡಲಾಗಿದ್ದರೆ, ವಿಪ್ರೋ ಎಂಟರ್ಪ್ರೈಸಸ್ 25 ಕೋಟಿ ರೂ. ಹಾಗೂ ಅಜೀಂ ಪ್ರೇಮ್ಜಿ ಫೌಂಡೇಶನ್ 1000 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ಹೇಳಿದೆ. ತನ್ನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿರುವ ಕಂಪನಿ ಈ ಕೊಡುಗೆ ಅಜೀಂ ಪ್ರೇಮ್ಜಿ ಫೌಂಡೇಶನ್ ನ ಕಾರ್ಪೋರೆಟ್ ರಿಸ್ಪಾನ್ಸಿಬಿಲಿಟಿಯನ್ನು ಒಳಗೊಂಡಿಲ್ಲ ಎಂದು ಹೇಳಿದೆ.
ಸಾರ್ವಜನಿಕ ವಲಯದ ಕಂಪನಿ KIOCL ಕೂಡ ಭಾರತದಲ್ಲಿನ ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು PMCARES FUNDಗೆ 10 ಕೋಟಿ ರೂ. ಕೊಡುಗೆ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ KIOCL ಅಧ್ಯಕ್ಷ ಹಾಗೂ ಮುಖ್ಯ ನಿರ್ದೇಶಕರಾಗಿರುವ M. V. ಸುಬ್ಬಾರಾವ್. ಈ ಕೊಡುಗೆಯಲ್ಲಿ ಕಂಪನಿಯ ನೌಕರರು ಕೂಡ ತಮ್ಮ ಒಂದು ದಿನದ ವೇತನವನ್ನು ನೀಡಿದ್ದಾರೆ ಎಂದಿದ್ದಾರೆ. ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಹೋರಾಟ ನಡೆಸಲು ಸದ್ಯ 10.1 ಕೋಟಿ ರೂ. ಕೊಡುಗೆ ನೀಡಲಾಗುವುದು ಎಂದಿರುವ ಸುಬ್ಬಾರಾವ್ ಕಂಪನಿಯ ಅಕ್ಕ-ಪಕ್ಕದಲ್ಲಿರುವ ಜನರಿಗೆ ಅವಶ್ಯಕ ವಸ್ತುಗಳು ಹಾಗೂ ಊಟ ಕೂಡ ನೀಡಲಾಗುವುದು ಎಂದು ಹೇಳಿದ್ದಾರೆ.