ಹೈದ್ರಾಬಾದ್: ಕೋವಿಡ್ -19 ಸಾಂಕ್ರಾಮಿಕ ಪ್ರಕೋಪದ ಹಿನ್ನೆಲೆ ಘೋಷಿಸಲಾಗಿರುವ ಲಾಕ್ಡೌನ್ ಒಂದು ವೇಳೆ ದೀರ್ಘಕಾಲದವರೆಗೆ ಮುಂದುವರಿದರೆ, ಐಟಿ ವಲಯದಲ್ಲಿ ಉದ್ಯೋಗ ಕಡಿತವಾಗಬಹುದು ಎಂದು ಮಾಜಿ ನಾಸ್ಕಾಮ್ ಅಧ್ಯಕ್ಷ ಆರ್ ಚಂದ್ರಶೇಖರ್ ಅಭಿಪ್ರಾಯಪಟ್ಟಿದ್ದಾರೆ. ಮನೆಯಿಂದ ಕೆಲಸ (Work From Home )ವು ದೀರ್ಘಾವಧಿಯಲ್ಲಿ ಸಕಾರಾತ್ಮಕ ಆಯ್ಕೆಯಾಗಿ ಪರಿಣಮಿಸಲಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಇದು ಐಟಿ ಕಂಪನಿಗಳಿಗೆ ಹೊಸ ಮಾರ್ಗವನ್ನು ತೆರೆಯುವ ಮೂಲಕ ಹೂಡಿಕೆಯನ್ನೂ ಸಹ ಉಳಿಸಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸದ್ಯ ಇರುವ ಪರಿಸ್ತಿತಿ ಮುಂದುವರೆದರೆ ದೇಶಾದ್ಯಂತ ಇರುವ ಸ್ಟಾರ್ಟ್ ಆಪ್ ಗಳು ಭಾರಿ ಸಂಕಷ್ಟಕ್ಕೆ ಒಳಗಾಗಲಿವೆ ಎಂದು ಈ ಮಾಜಿ ನಾಸ್ಕಾಮ್ ಅಧಿಕಾರಿ ಹೇಳಿದ್ದಾರೆ. ಈ ಸ್ಟಾರ್ಟ್ ಆಪ್ ಕಂಪನಿಗಳು ಬಂಡವಾಳಶಾಹಿಗಳಿಂದ ಸಿಕ್ಕ ಆರ್ಥಿಕ ನೆರವಿನ ಕಾರಣ ಕಾರ್ಯನಿರ್ವಹಿಸುತ್ತಿವೆ.
ಕಂಪನಿಗಳು ಎರಡು ಕಾರಣಗಳಿಂದ ಉದ್ಯೋಗ ಕಡಿತಗೊಳಿಸುವುದಿಲ್ಲ ಎಂದು ಆರ್. ಚಂದ್ರಶೇಖರ್ ಹೇಳಿದ್ದಾರೆ. ಮೊದಲನೆಯದಾಗಿ ಈ ಕಂಪನಿಗಳು ತಮ್ಮ ಕುಶಲ ನೌಕರರನ್ನು ಕಳೆದುಕೊಳ್ಳಲು ಬಯಸುವುದಿಲ್ಲ ಹಾಗೂ ಎರಡನೆಯದಾಗಿ ಕೆಲಸಗಾರರಿಗೆ ನೀಡಲು ಅವರ ಬಳಿ ಸಾಕಷ್ಟು ಬಂಡವಾಳವಿದೆ.
ಒಂದು ವೇಳೆ ಕೆಲ ದೊಡ್ಡ ಕಂಪನಿಗಳು ಉದ್ಯೋಗ ಕಡಿತಗೊಳಿಸಿದರೂ ತಾತ್ಕಾಲಿಕ ಅಥವಾ ಇಂಟರ್ನ್ ಆಗಿ ಕಾರ್ಯನಿರ್ವಹಿಸುವ ಉದ್ಯೋಗಿಗಳನ್ನು ತೆಗೆದುಹಾಕುತ್ತವೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಎಲ್ಲಿಯವರೆಗೆ ಈ ಕಂಪನಿಗಳ ಬಳಿ ಬಂದವಾಳವಿದೆಯೋ, ಅಲ್ಲಿಯವರೆಗೆ ಈ ಕಂಪನಿಗಳು ನಿಯಮಿತ ಮತ್ತು ಖಾಯಂ ನೌಕರರನ್ನು ತೆಗೆದುಹಾಕುವುದಿಲ್ಲ ಎಂದು ಅವರು ಹೇಳಿದ್ದಾರೆ.
ಆದರೆ, ಇದೇ ವೇಳೆ ಈ ಪರಿಸ್ಥಿತಿ ಎಷ್ಟು ಕಾಲ ಇರುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಭಿತವಾಗಿದೆ ಎಂದು ಚಂದ್ರಶೇಖರ್ ಹೇಳಿದ್ದಾರೆ. ಒಂದು ತಿಂಗಳು, ಎರಡು ತಿಂಗಳು ಅಥವಾ ಮೂರು ತಿಂಗಳು. ಅದಾದ ಬಳಿಕ ಈ ಕಂಪನಿಗಳೂ ಕೂಡ ಒತ್ತಡಕ್ಕೆ ಸಿಲುಕಲಿವೆ. ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಬ್ಸಿಡಿ ನೀಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ.PTI ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು ಇಂತಹ ಪರಿಸ್ಥಿತಿ ಎಷ್ಟು ಕಾಲ ಇರುತ್ತದೆ ಎಂಬುದೇ ಒಂದು ದೊಡ್ಡ ಪ್ರಶ್ನೆ ಎಂದು ಹೇಳಿದ್ದಾರೆ.
ವಿಶ್ವದ ಹಲವು ದೇಶಗಳಲ್ಲಿ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಅಲ್ಪಾವಧಿಯಲ್ಲಿ ಇದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಆದರೆ ಭವಿಷ್ಯದಲ್ಲಿ ಈ ಕಾರ್ಯ ಸಂಸ್ಕೃತಿ ತರಲಿರುವ ಬದಲಾವಣೆ ಭಾರತದ IT ಕಂಪನಿಗಳು ಈ ಮೊದಲು ಎಂದಿಗೂ ಅನುಭವಿಸದ ಮಾರ್ಪಾಟು ತರಲಿದೆ ಎಂದು ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಮನೆಯಿಂದ ಕೆಲಸ ಮಾಡುವುದರಿಂದ ನೌಕರರ ಉತ್ಪಾದಕತೆ, ಲಾಜಿಸ್ಟಿಕ್ಸ್ ವೆಚ್ಚ ಮತ್ತು ಕಚೇರಿ ಸ್ಥಳಾವಕಾಶ ಉಳಿತಾಯವಾಗುತ್ತದೆ ಎಂದು ಚಂದ್ರಶೇಖರ್ ಹೇಳಿದರು.