ದೇಶದ ಆರ್ಥಿಕತೆ ಮೇಲೆ ಕರೋನಾ ವೈರಸ್ ನೇರ ಪರಿಣಾಮ!

ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರವು 0.2% ನಷ್ಟು ಕಡಿಮೆ ಆಗಬಹುದು.

Last Updated : Mar 3, 2020, 11:07 AM IST
ದೇಶದ ಆರ್ಥಿಕತೆ ಮೇಲೆ ಕರೋನಾ ವೈರಸ್ ನೇರ ಪರಿಣಾಮ! title=

ನವದೆಹಲಿ: ಚೀನಾದಲ್ಲಿ ಕಂಡು ಬಂದಿರುವ ಮಹಾಮಾರಿ 'ಕರೋನಾ ವೈರಸ್' ಜಗತ್ತಿನಾದ್ಯಂತ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇಲ್ಲಿಯವರೆಗೆ ಭಾರತೀಯ ಆರ್ಥಿಕತೆಯಲ್ಲಿ ಅದರ ಪ್ರಭಾವದ ಬಗ್ಗೆ ಕೇವಲ ಊಹಾಪೋಹಗಳು ಕೇಳಿ ಬರುತ್ತಿದ್ದವು. ಆದರೆ ಈಗ ಅದರ ದೃಢವಾದ ಫಲಿತಾಂಶ ಕಾಣಲಾರಂಭಿಸಿವೆ. ದೇಶದ ಪ್ರಮುಖ ಕ್ಷೇತ್ರಗಳಿಗೆ ಕಚ್ಚಾ ವಸ್ತುಗಳ ಕೊರತೆಯಿಂದಾಗಿ, ಪ್ರಸಕ್ತ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರವನ್ನು 0.2% ರಷ್ಟು ಕಡಿಮೆ ಆಗಬಹುದು ಎಂದು ವಿದೇಶಿ ದಲ್ಲಾಳಿ ಕಂಪನಿಯೊಂದು ಅಭಿಪ್ರಾಯ ಪಟ್ಟಿದೆ.

ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿಯನ್ನು ಅನುಭವಿಸುತ್ತಿದೆ ಮತ್ತು ಸರ್ಕಾರದ ಅಂದಾಜಿನ ಪ್ರಕಾರ, 2019-20ನೇ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯ ದರವು (ಜಿಡಿಪಿ) 5% ಆಗಿರಬಹುದು, ಇದು ಒಂದು ದಶಕದಲ್ಲೇ ಕಡಿಮೆ ಇರುತ್ತದೆ. ಮೂರನೇ ತ್ರೈಮಾಸಿಕದಲ್ಲಿ ಬೆಳವಣಿಗೆ 4.7% ಆಗಿದ್ದು, ಏಳು ವರ್ಷಗಳ ಕನಿಷ್ಠ ಮಟ್ಟ ತಲುಪಿದೆ.

ಭಾರತದಲ್ಲಿ ಎರಡು ಕರೋನಾ ವೈರಸ್‌ ಪ್ರಕರಣ ಪತ್ತೆ:
ದೇಶದಲ್ಲಿ ಎರಡು ಕರೋನಾ ವೈರಸ್ ಪ್ರಕರಣಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಖಚಿತಪಡಿಸಿದೆ. ಆದರೆ ಈ ವೈರಸ್‌ನ ಮೂರು ಪ್ರಕರಣಗಳಿಗೆ ಮೊದಲು ಕೇರಳದಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಯುಬಿಎಸ್ ಸೆಕ್ಯುರಿಟೀಸ್ (UBS Securities) ವರದಿಯಲ್ಲಿ, ಎಲೆಕ್ಟ್ರಾನಿಕ್ಸ್, ಔಷಧೀಯ ಮತ್ತು ವಾಹನ ಕ್ಷೇತ್ರಗಳಲ್ಲಿನ ಪೂರೈಕೆ ಸರಪಳಿಯು ಅಡಚಣೆಯನ್ನು ಕಾಣಬಹುದು, ಇದು ಆರ್ಥಿಕ ಬೆಳವಣಿಗೆಯನ್ನು ಹದಗೆಡಿಸುತ್ತದೆ. ವರದಿಯ ಪ್ರಕಾರ, "ಪರಿಸ್ಥಿತಿ ಇನ್ನೂ ಬದಲಾಗುತ್ತಿದೆ ಮತ್ತು ಆರ್ಥಿಕ ಪ್ರಭಾವದ ಪ್ರಮಾಣವು ಈ ಸಮಯದಲ್ಲಿ ಬಹಳ ಅನಿಶ್ಚಿತವಾಗಿದೆ ಮತ್ತು ಮಾರ್ಚ್ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ದರವು 0.2% ರಷ್ಟು ಕಡಿಮೆಯಾಗಬಹುದು ಎಂದು ನಾವು ಭಾವಿಸುತ್ತೇವೆ" ಎಂದು ಹೇಳಲಾಗಿದೆ.

ಕಾರು ಕಂಪನಿಗಳ ಮೇಲೆ ನೇರ ಪರಿಣಾಮ:
ಫೆಬ್ರವರಿ ಕೊನೆಯ ದಿನ ವಿವಿಧ ಕಾರು ಕಂಪನಿಗಳು ತಮ್ಮ ಮಾರಾಟ ಅಂಕಿಅಂಶಗಳನ್ನು ಬಿಡುಗಡೆ ಮಾಡಿವೆ. ಇದರ ಪ್ರಕಾರ, ಹೆಚ್ಚಿನ ಕಾರು ಕಂಪನಿಗಳು ಶೇಕಡಾ 30-50ರಷ್ಟು ನಷ್ಟವನ್ನು ಅನುಭವಿಸಿವೆ. ಉದಾಹರಣೆಗೆ, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್‌ನ ದೇಶೀಯ ಮಾರಾಟವು ಫೆಬ್ರವರಿಯಲ್ಲಿ ಶೇ 46.26 ರಷ್ಟು ಇಳಿದು 7,269 ವಾಹನಗಳಿಗೆ ತಲುಪಿದೆ. ಫೆಬ್ರವರಿಯಲ್ಲಿ ಟಾಟಾ ಮೋಟಾರ್ಸ್‌ನ ದೇಶೀಯ ಮಾರಾಟವು ಶೇಕಡಾ 34 ರಷ್ಟು ಕುಸಿದು 38,002 ವಾಹನಗಳಿಗೆ ತಲುಪಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ ಮಹೀಂದ್ರಾ ಮತ್ತು ಮ್ಯಾನ್‌ಹಿಂದ್ರಾದ(Mahindra & Manhindra) ಒಟ್ಟು ಮಾರಾಟವು 42% ನಷ್ಟು ಇಳಿದು 32,476 ಕ್ಕೆ ತಲುಪಿದೆ. ಮತ್ತು ಮಾರುತಿ ಸುಜುಕಿ ಇಂಡಿಯಾ ಫೆಬ್ರವರಿ ತಿಂಗಳಲ್ಲಿ ಒಟ್ಟು 1,47,110 ಕಾರುಗಳನ್ನು ಮಾರಾಟ ಮಾಡಿದೆ, ಇದು ಶೇಕಡಾ 3.6 ರಷ್ಟು ಕಡಿಮೆಯಾಗಿದೆ.

ಚೀನಾ ಮಾತ್ರವಲ್ಲ ಕರೋನಾ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಪರಿಣಾಮ ಬೀರಿದೆ. ಇದರ ಪರಿಣಾಮವು ಜಗತ್ತಿನ ಮಾರುಕಟ್ಟೆಗಳಲ್ಲಿಯೂ ಕಂಡುಬರುತ್ತದೆ. ಈಗ ಮೂಡೀಸ್ (moody's) ಸಹ ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕರೋನಾ ವೈರಸ್ ಸಾಂಕ್ರಾಮಿಕ ರೂಪವನ್ನು ಪಡೆದುಕೊಂಡರೆ, ವಿಶ್ವಾದ್ಯಂತ ಆರ್ಥಿಕ ಕುಸಿತ ಉಂಟಾಗಬಹುದು ಎಂದು ಮೂಡಿಸ್ ಅನಾಲಿಟಿಕ್ಸ್ ಹೇಳಿದೆ.

Trending News