2019 ರಲ್ಲಿ ಅಧಿಕಾರ ವಹಿಸಿಕೊಳ್ಳಲು ಕಾಂಗ್ರೆಸ್ ಸಿದ್ಧವಾಗಿದೆ: ರಾಹುಲ್ ಗಾಂಧಿ

ಅಮೇರಿಕ ಸಂಯುಕ್ತ ಸಂಸ್ಥಾನದ ಕ್ಯಾಲಿಫೋರ್ನಿಯಾ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಹನ ನಡೆಸಿದ ಕಾಂಗ್ರೇಸ್ ಉಪಾಧ್ಯಕ್ಷ ರಾಹುಲ್ ಗಾಂಧಿ.  

Last Updated : Sep 12, 2017, 12:57 PM IST
2019 ರಲ್ಲಿ ಅಧಿಕಾರ ವಹಿಸಿಕೊಳ್ಳಲು  ಕಾಂಗ್ರೆಸ್ ಸಿದ್ಧವಾಗಿದೆ: ರಾಹುಲ್ ಗಾಂಧಿ title=

ನವ ದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಜಯಭೇರಿ ಬಾರಿಸಿ ಅಧಿಕಾರ ಹಿಡಿಯಲಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾ, ಬರ್ಕ್ಲಿಯ ಪ್ರತಿಷ್ಠಿತ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಹನ ನಡೆಸಿದ ರಾಹುಲ್ ಗಾಂಧಿ 2019ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಜೊತೆಗೆ ಕೇಂದ್ರ ಸರ್ಕಾರದ ನೋಟು ಅಮಾನ್ಯೀಕರಣ ಮತ್ತು ಭ್ರಷ್ಟಾಚಾರದ ಬಗೆಗಿನ ನಿಲುವಿನ ಬಗ್ಗೆ ಅಸಮಾಧಾನವನ್ನು ಹೊರಹಾಕಿದರು. 

'ಇಂಡಿಯಾ@70: ರಿಫ್ಲೆಕ್ಷನ್ಸ್ ಆನ್ ದಿ ಪಾಥ್ ಫಾರ್ವರ್ಡ್' ('India@70: Reflections on the Path Forward') ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಕಾಂಗ್ರೆಸ್ ಎದುರಿಸುತ್ತಿರುವ ಭವಿಷ್ಯದ ಸವಾಲುಗಳ ದೃಷ್ಟಿಯಿಂದ ಪಕ್ಷವನ್ನು ಪುನರ್ನಿರ್ಮಿಸುವ ಅಗತ್ಯವಿದೆ ಎಂದರು. 2013 ರಲ್ಲಿ ಅಧಿಕಾರ ಕಳೆದುಕೊಳ್ಳುವ ಎರಡು ವರ್ಷಗಳ ಮುಂಚೆ ಅವರ ಪಕ್ಷ ಅಹಂಕಾರ ಬೆಳಸಿಕೊಂಡು ಜನರ ಜೊತೆಗಿನ ಸಂವಹನವನ್ನು ನಿಲ್ಲಿಸಿತು ಎಂಬುದನ್ನು ಒಪ್ಪಿಕೊಂಡರು.

ಅಜ್ಜಿ ಇಂದಿರಾ ಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರ ಹತ್ಯೆಗಳನ್ನು ನೆನಪಿಸಿಕೊಂಡ ರಾಹುಲ್ "ಭಯೋತ್ಪಾದನೆಯ ಹಾನಿಯನ್ನು ನನಗಿಂತ ಉತ್ತಮವಾಗಿ ಅರ್ಥಮಾಡಿಕೊಳ್ಳಲು ಬೇರೆಯವರಿಂದ ಸಾಧ್ಯವಿಲ್ಲ. ಹಿಂಸಾಚಾರದಿಂದ ನಾನು ನನ್ನ ಅಜ್ಜಿ ಮತ್ತು ತಂದೆಯನ್ನು ಕಳೆದುಕೊಂಡೆ. ಹಿಂಸಾಚಾರವನ್ನು ನಾನು ಅರ್ಥಮಾಡಿಕೊಳ್ಳದಿದ್ದರೆ ಮತ್ಯಾರು ಅರ್ಥಮಾಡಿಕೊಳ್ಳಲು ಸಾಧ್ಯ? ಅಹಿಂಸೆಯ ಕಲ್ಪನೆಯಿಂದ ಮಾತ್ರ ಮಾನವೀಯತೆಯನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಧ್ರುವೀಕರಣದ ರಾಜಕೀಯ ತುಂಬಾ ಅಪಾಯಕಾರಿ‌ ಎಂದ ಅವರು, ವಿಭಜನೆಯ ಮತ್ತು ಧ್ರುವೀಕರಣದ ರಾಜಕೀಯವು ತೀವ್ರಗಾಮಿಯಾಗಿ ಜನರನ್ನು ಪ್ರತ್ಯೇಕಿಸುತ್ತದೆ ಎಂದರು.

ಸರಕು ಮತ್ತು ಸೇವಾ ತೆರಿಗೆಯ (ಜಿಎಸ್ಟಿ) ದೋಷಪೂರಿತ ಅನುಷ್ಠಾನ ಆರ್ಥಿಕ ಬೆಳವಣಿಗೆಯ ಕುಸಿತಕ್ಕೆ ಕಾರಣವಾದ ದೆವ್ವದ ನಿರ್ಣಯ.  ಇದಲ್ಲದೆ ಮುಖ್ಯ ಆರ್ಥಿಕ ಸಲಹೆಗಾರರು (ಸಿಇಎ) ಅಥವಾ ಸಂಸತ್ತನ್ನು ಸಂಪರ್ಕಿಸದೆಯೇ ಹಳೆಯ ನೋಟುಗಳನ್ನು ಅಮಾನ್ಯಿಕರಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತೀವ್ರ ಹಾನಿ ಉಂಟಾಗಿದೆ. ನೋಟು ರದ್ದತಿಯಿಂದಾಗಿ ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನೋಟುಗಳ ನಿಷೇಧವು ದೇಶಕ್ಕೆ ಯಾವ ಒಳ್ಳೆಯದನ್ನೂ ಮಾಡಲಿಲ್ಲ ಎಂದರು.

ಬಿಜೆಪಿ ಮತ್ತು ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಪ್ರಧಾನಮಂತ್ರಿ ಆರ್ಟಿಐ ಕಾಯ್ದೆಗೆ ತಿದ್ದುಪಡಿ ಮಾಡಿದ್ದಾರೆ. ಇದು ಕಾಂಗ್ರೆಸ್ ಆಳ್ವಿಕೆಯ ಅವಧಿಯಲ್ಲಿ ಹೆಚ್ಚು ಪಾರದರ್ಶಕವಾಗಿತ್ತು. ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಿ ಅಲ್ಲಿನ ಪರಿಸ್ಥಿತಿ ಬಿಗಡಾಯಿಸುತ್ತಿದೆ. ನಾವು ಕಾಶ್ಮೀರದಲ್ಲಿ ಶಾಂತಿಯನ್ನು ನೆಲೆಗೊಳಿಸಿದ್ದೆವು. 2013ರ ಹೊತ್ತಿಗೆ ಭಯೋತ್ಪಾದನೆಯನ್ನು ಹಿಂದೆ ಸರಿಯುವಂತೆ ಮಾಡಿದ್ದೆವು. ಆದರೆ ಬಿಜೆಪಿ-ಪಿಡಿಪಿ ಮೈತ್ರಿಕೂಟ ಸರ್ಕಾರಗಳು ಕೇವಲ 30 ದಿನಗಳಲ್ಲಿ ಉತ್ತಮ ಕೆಲಸವನ್ನು ನಾಶಪಡಿಸಿತು' ಎಂದು ಹೇಳಿದರು.

ಬಿಜೆಪಿ ಜಾರಿಗೆ ತಂದ ಎಲ್ಲ ಯೋಜನೆಗಳ ಮೂಲಸ್ವರೂಪ ನಮ್ಮದು, 9 ವರ್ಷ ಮನಮೋಹನ್ ಸಿಂಗ್​ ಅವರಂಥವರ ಹಿಂದೆ ಕೆಲಸ ಮಾಡಿದ್ದೇನೆ. ನಾನು ಯಾವುದೇ ಜವಾಬ್ದಾರಿ ನಿಭಾಯಿಸಲು ಸಿದ್ಧನಿದ್ದೇನೆ ಎಂದು ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯವರು ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲು ಬಿಜೆಪಿಯಿಂದ ಬೃಹತ್​ ಜಾಲ ತೆರೆದಿದೆ. ಒಂದು ಸಾವಿರ ಹುಡುಗರು ಕಂಪ್ಯೂಟರ್​ ಎದುರು ಕುಳಿತು ಸುಳ್ಳು ಹಬ್ಬಿಸುತ್ತಿದ್ದಾರೆ. ದೇಶವನ್ನು ಮುನ್ನಡೆಸುವ ವ್ಯಕ್ತಿಯೇ ಇವೆಲ್ಲದನ್ನೂ ನಡೆಸುತ್ತಿದ್ದಾರೆ ಎಂದು  ವಿವರಿಸಿದರು.

ರಾಹುಲ್ ಗಾಂಧಿಯವರ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಇದು ಕಾಂಗ್ರೆಸ್ ನಾಯಕರ ಹತಾಶೆಯಹತಾಶೆಯ ಮಾತುಗಳು ಎಂದರು.

Trending News