ಬೆಂಗಳೂರು: ಬಿಜೆಪಿಯ ಆಪರೇಶನ್ ಕಮಲ ಖಂಡಿಸಿ ರಾಜಭವನದ ಬಳಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಹಿರಿಯ ನಾಟಕ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸಮ್ಮಿಶ್ರ ಸರ್ಕಾರದ ಸುಗಮ ಆಡಳಿತಕ್ಕೆ ಬಿಜೆಪಿ ತೊಂದರೆ ಮಾಡುತ್ತಿದೆ. ಆಪರೇಶನ್ ಕಮಲ ಮಾಡುವ ಶಾಸಕರನ್ನು ಸೆಳೆಯಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಇಂದು ಬೆಳಿಗ್ಗೆಯಿಂದಲೇ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಕಾಂಗ್ರೆಸ್ ನಾಯಕರಾದ ಗುಲಾಂ ನಬಿ ಆಜಾದ್, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ರಾಜಭವನದ ಮುಂದೆ ಪ್ರತಿಭಟನೆಯಲ್ಲಿ ನಿರತರಾಗಿದ್ದರು.
ಬಳಿಕ ರಾಜಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಉಂಟಾಗಿರುವ ಮೈತ್ರಿ ಬಿಕ್ಕಟ್ಟನ್ನು ಬಗೆಹರಿಸಲು ಮಂಗಳವಾರವಷ್ಟೇ ಬೆಂಗಳೂರಿಗೆ ಆಗಮಿಸಿದ್ದ ಗುಲಾಂ ನಬಿ ಆಜಾದ್ ಅವರು, ಸಮ್ಮಿಶ್ರ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಇಂದು ಬೆಳಿಗ್ಗೆ ಕೆ.ಕೆ.ಗೆಸ್ಟ್ ಹೌಸ್ ನಲ್ಲಿ ಪಕ್ಷದ ನಾಯಕರ ಸಭೆ ನಡೆಸಿದ್ದರು.