ರಾಯ್ಪುರ್: ವಿಧಾನಸಭಾ ಚುನಾವಣಾ ಹೊಸ್ತಿಲಲ್ಲಿರುವ ಛತ್ತೀಸ್ಗಢ್ದಲ್ಲಿ ಅಧಿಕಾರ ಉಳಿಸಿಕೊಳ್ಳಲು ಭಾರಿ ರಣ ತಂತ್ರಗಳನ್ನು ಹೂಡುತ್ತಿರುವ ಬಿಜೆಪಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಹೊಡೆತ ಬಿದ್ದಿದ್ದು, ಕಾಂಗ್ರೆಸ್ ಪಕ್ಷದ ಆದಿವಾಸಿ ಮುಖಂಡ ಇಂದು ಕಾಂಗ್ರೆಸ್ಗೆ ಶಾಕ್ ಕೊಟ್ಟು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇನ್ನೇನು ಚುನಾವಣೆಗೆ ಎರಡು ತಿಂಗಳು ಬಾಕಿ ಇದೆ ಎನ್ನುವ ಸಮಯದಲ್ಲಿ ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಹಾಗೂ ಪ್ರಬಲ ಆದಿವಾಸಿ ಮುಖಂಡರಾಗಿದ್ದ ರಾಮ್ದಯಾಳ್ ಯೂಕಿ ಬಿಜೆಪಿ ತೆಕ್ಕೆಗೆ ಬಿದ್ದಿದ್ದು ಕೈ ಪಡೆಗೆ ಬಾರಿ ಅಘಾತ ಉಂಟಾಗಿದೆ.
ನಾಲ್ಕು ಭಾರಿ ಶಾಸಕರಾಗಿ ಆಯ್ಕೆಯಾಗಿರುವ ರಾಮ್ದಯಾಳ್ ಯೂಕಿ ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಛತ್ತೀಸ್ಗಡ ಸಿಎಂ ರಮಣ್ ಸಿಂಗ್ ಅವರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಚುನಾವಣೆ ಸಮಯದಲ್ಲಿ ಪಕ್ಷಾಂತರ ಹೊಸತಲ್ಲ:
ರಾಮ್ದಯಾಳ್ ಯೂಕಿ ಕಮಲ ಹಿಡಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಛತ್ತೀಸ್ಗಢ್ ಕಾಂಗ್ರೆಸ್ ಮುಖ್ಯಸ್ಥ ಭುಪೇಶ್ ಬಂಗೇಲ್, ಚುನಾವಣೆ ಸಮಯದಲ್ಲಿ ಪಕ್ಷಾಂತರ ಹೊಸದಲ್ಲ ಎಂದಿದ್ದಾರೆ.
ಡಿಸೆಂಬರ್ 7, 2003ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಿಜೆಪಿಯ ರಮಣ್ ಸಿಂಗ್ ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ ಎನ್ನುತ್ತಿರುವ ಬಿಜೆಪಿ ಛತ್ತೀಸ್ಗಢ್ದಲ್ಲಿ ಶತಾಯಗತಾಯ ತನ್ನ ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದೆ.