ಚಂದ್ರಯಾನ-2: ಚಂದ್ರನ ಮೇಲ್ಮೈ ಸ್ಪರ್ಶಿಸಿ 14 ದಿನಗಳ ಕಾಲ ಸಂಶೋಧನೆ ನಡೆಸಲಿರುವ 'ವಿಕ್ರಮ್' ಲ್ಯಾಂಡರ್‌

ಇಂದು ಮಧ್ಯ ರಾತ್ರಿ 1: 30 ರಿಂದ 2: 30 ರ ನಡುವೆ ಚಂದ್ರನ ದಕ್ಷಿಣ ಧ್ರುವದಲ್ಲಿ 'ವಿಕ್ರಮ್' ಲ್ಯಾಂಡರ್‌  ಇಳಿಯಲಿದೆ.

Last Updated : Sep 6, 2019, 01:07 PM IST
ಚಂದ್ರಯಾನ-2: ಚಂದ್ರನ ಮೇಲ್ಮೈ ಸ್ಪರ್ಶಿಸಿ 14 ದಿನಗಳ ಕಾಲ ಸಂಶೋಧನೆ ನಡೆಸಲಿರುವ 'ವಿಕ್ರಮ್' ಲ್ಯಾಂಡರ್‌  title=

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದತ್ತ ಸಾಗಿರುವ ಚಂದ್ರಯಾನ-2 ಬಾಹ್ಯಾಕಾಶ ನೌಕೆಯಿಂದ 'ವಿಕ್ರಮ್' ಲ್ಯಾಂಡರ್‌ ಅನ್ನು ಇಳಿಸುವ ಐತಿಹಾಸಿಕ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಲ್ಯಾಂಡರ್ ನಿಯಂತ್ರಣ ಕೇಂದ್ರದಲ್ಲಿ ವಿಜ್ಞಾನಿಗಳು ಅಂತಿಮ ಹಂತದ ಸಿದ್ದತೆಯಲ್ಲಿ ತೊಡಗಿದ್ದಾರೆ.

ಜುಲೈ 22 ರಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪ್ರಾರಂಭಿಸಿದ ಚಂದ್ರಯಾನ -2 ಮಿಷನ್ (ಚಂದ್ರಯಾನ 2) ಅಡಿಯಲ್ಲಿ ವಿಕ್ರಮ್ ಎಂಬ ಲ್ಯಾಂಡರ್ ಇಂದು ತಡರಾತ್ರಿ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ಈ ಸಂಶೋಧನಾ ವಾಹನವು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು 14 ದಿನಗಳ ಕಾಲ ಸಂಶೋಧನೆ ನಡೆಸಲಿದೆ. ಇದರೊಂದಿಗೆ ಭಾರತ ಹೊಸ ಇತಿಹಾಸ ಸೃಷ್ಟಿಸುತ್ತದೆ. ವಿಕ್ರಮ್ ಜೊತೆಗೆ, ಪ್ರಜ್ಞಾನ್ ಎಂಬ ರೋಬಾಟ್ ವಾಹನವು ಚಂದ್ರನ ಮೇಲ್ಮೈಗೆ ಇಳಿಯಲಿದೆ. ರೋವರ್‌ 'ಪ್ರಜ್ಞಾನ್‌' ಚಲಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಭಾರತವಲ್ಲದೆ ವಿಶ್ವದ ಹಲವು ದೇಶಗಳ ಆಸಕ್ತರು ಕಾಯುತ್ತಿದ್ದಾರೆ.

ಲ್ಯಾಂಡರ್ ವಿಕ್ರಮ್ 1,471 ಕೆಜಿ ತೂಕ ಹೊಂದಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ವಿಜ್ಞಾನಿ ಡಾ. ವಿಕ್ರಮ್ ಸಾರಾಭಾಯ್ ಅವರ ಹೆಸರನ್ನು ಇದಕ್ಕೆ ಇಡಲಾಗಿದೆ. ಇದು 650 ವ್ಯಾಟ್ ಶಕ್ತಿಯಿಂದ ಹೊಂದಿದೆ. ಇದು 2.54 * 2 * 1.2 ಮೀಟರ್ ಉದ್ದವಾಗಿದೆ. ಚಂದ್ರನ ಮೇಲೆ ಇಳಿಯುವಾಗ, ಇದು ಚಂದ್ರನ 1 ದಿನ ನಿರಂತರವಾಗಿ ಕೆಲಸ ಮಾಡುತ್ತದೆ. ಚಂದ್ರನ 1 ದಿನ ಭೂಮಿಯ 14 ದಿನಗಳಿಗೆ ಸಮಾನವಾಗಿರುತ್ತದೆ. 

ನಾಲ್ಕು ಪ್ರಮುಖ ಸಾಧನಗಳನ್ನು ಹೊಂದಿರುವ ವಿಕ್ರಮ್:
ಚಂದ್ರನ ಸಂಶೋಧನೆಗಾಗಿ ಲ್ಯಾಂಡರ್ ವಿಕ್ರಮ್ ಜೊತೆಗೆ 4 ಪ್ರಮುಖ ಸಾಧನಗಳನ್ನು ಕಳುಹಿಸಲಾಗಿದೆ. ಚಂದ್ರನ ಮೇಲೆ ಭೂಕಂಪನ ಚಲನೆಯನ್ನು ಅಳೆಯಲು ಮತ್ತು ಸಂಶೋಧಿಸಲು ವಿಶೇಷ ಸಾಧನವನ್ನು ಸ್ಥಾಪಿಸಲಾಗಿದೆ. ಇದಲ್ಲದೆ, ಚಂದ್ರನ ಮೇಲೆ ತಾಪಮಾನ ಬದಲಾಗುತ್ತಿರುವುದನ್ನು ಪರೀಕ್ಷಿಸಲು ವಿಶೇಷ ಸಾಧನವೂ ಇದೆ. ಇದರಲ್ಲಿ ಮೂರನೇ ಸಾಧನವೆಂದರೆ ಲ್ಯಾಂಗ್‌ಮೂರ್ ಪ್ರೋಬ್. ಇದು ಚಂದ್ರನ ವಾತಾವರಣದ ಮೇಲಿನ ಪದರ ಮತ್ತು ಚಂದ್ರನ ಮೇಲ್ಮೈಯನ್ನು ಸಂಶೋಧಿಸುತ್ತದೆ. ವಿಕ್ರಮ್ ನ ನಾಲ್ಕನೇ ಸಾಧನವಾದ ಲೇಸರ್ ರೆಟ್ರೊರೆಫ್ಲೆಕ್ಟರ್ ಮೂಲಕ ಮ್ಯಾಪಿಂಗ್ ಮತ್ತು ದೂರ ಸಂಶೋಧನೆ ನಡೆಸಲಿದೆ.

ಸೆಪ್ಟೆಂಬರ್ 7ರಂದು ಚಂದ್ರನ ಮೇಲೆ ಚಂದ್ರಯಾನ-2 ನೌಕೆ ಇಳಿಯುವ ಕೊನೆಯ 15 ನಿಮಿಷಗಳು ರೋಚಕವಾಗಿರಲಿದೆ ಎಂದಿರುವ ಇಸ್ರೋ ಅಧ್ಯಕ್ಷ ಡಾ. ಕೆ. ಶಿವನ್ ಹೇಳಿದ್ದಾರೆ. ಈ ಅದ್ಭುತ ಕ್ಷಣಕ್ಕೆ ಸಾಕ್ಷಿಯಾಗಲು ಇಸ್ರೋ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದೆ.

Trending News