ನವದೆಹಲಿ: ನಷ್ಟದಲ್ಲಿರುವ ಟೆಲಿಕಾಂ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗಳ ಪುನಶ್ಚೇತನ ಮತ್ತು ವಿಲೀನಗೊಳಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ತಾತ್ತ್ವಿಕ ಒಪ್ಪಿಗೆ ನೀಡಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಎಂಟಿಎನ್ಎಲ್ ಅಥವಾ ಬಿಎಸ್ಎನ್ಎಲ್ಗಳನ್ನು ಮುಚ್ಚುವುದಿಲ್ಲ ಅಥವಾ ಅದರಲ್ಲಿ ಸರ್ಕಾರದ ಹೂಡಿಕೆಯನ್ನು ಹಿಂತೆಗೆದುಕೊಳ್ಳುವುದಿಲ್ಲ. ಎರಡೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಪುನಶ್ಚೇತನಕ್ಕಾಗಿ 29,937 ಕೋಟಿ ರೂ.ಗಳನ್ನು ಸರ್ಕಾರ ಹೂಡಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ನಾಲ್ಕು ಹಂತಗಳಲ್ಲಿ ಪುನಶ್ಚೇತನ ಕಾರ್ಯ ನಡೆಸಲು ಸರ್ಕಾರ ಯೋಜನೆ ರೂಪಿಸಿದ್ದು, ವೆಚ್ಚ ಕಡಿತ ಮಾಡುವ ಸಲುವಾಗಿ ಸ್ವಯಂ ನಿವೃತ್ತಿ ಹೊಂದುವವರಿಗೆ ವಿಶೇಷ ಪ್ಯಾಕೇಜ್ ಪರಿಚಯಿಸಲಾಗುವುದು. ಇದರಂತೆ, ವಿಆರ್ಎಸ್ ತೆಗೆದುಕೊಳ್ಳುವವರಿಗೆ 60 ವರ್ಷ ವಯಸ್ಸಿನ ತನಕದ ವೇತನದ ಶೇಕಡ 125 ಪರಿಹಾರ ಮತ್ತು ಪಿಂಚಣಿಯನ್ನೂ ಕೊಡಲಾಗುವುದು ಎಂದು ಟೆಲಿಕಾಂ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ.