ನವದೆಹಲಿ: ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯುವುದು ನಿಮಗೆ ಮತ್ತಷ್ಟು ಸುಲಭವಾಗಲಿದೆ. ಕೇಂದ್ರ ಸರ್ಕಾರ ಇನ್ಮುಂದೆ ನಿಮಗೆ ಯಾವುದೇ ವಿಳಂಬವಿಲ್ಲದೆ ಪ್ಯಾನ್ ಕಾರ್ಡ್ ನೀಡಲಿದೆ. ಇದಕ್ಕಾಗಿ ಸರ್ಕಾರ ಹೊಸ ಪ್ಲಾನ್ ವೊಂದನ್ನು ಸಿದ್ಧಪಡಿಸಿದೆ. ಈ ಹೊಸ ಪ್ಲಾನ್ ಅಡಿ ಪ್ಯಾನ್ ಕಾರ್ಡ್ ಅಪ್ಲೈ ಮಾಡಲು ಸರಳವಾದ ವಿಧಾನ ಅನುಸರಿಸಲಾಗುತ್ತಿದೆ. ಈ ಕುರಿತು ತನ್ನ ಬಜೆಟ್ ಭಾಷಣದಲ್ಲಿ ಹೇಳಿಕೆ ನೀಡಿರುವ ವಿತ್ತಸಚಿವೆ ನಿರ್ಮಲಾ ಸೀತಾರಾಮನ್, ಪ್ಯಾನ್ ಕಾರ್ಡ್ ಪಡೆಯುವ ವಿಧಾನವನ್ನು ತಮ್ಮ ಸರ್ಕಾರ ಇನ್ನಷ್ಟು ಸರಳೀಕರಣಗೊಳಿಸಲಿದೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ವಿಧಾನ ಸೂಚಿಸಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಇನ್ಮುಂದೆ ಗ್ರಾಹಕರು ತಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಬಳಸಿ ಪ್ಯಾನ್ ಕಾರ್ಡ್ ಗೆ ಅಪ್ಪ್ಲೈ ಮಾಡಬಹುದಾಗಿದ್ದು, ಇದರಿಂದ ಪ್ಯಾನ್ ಕಾರ್ಡ್ ಕೂಡ ಶೀಘ್ರದಲ್ಲಿಯೇ ಜಾರಿಗೊಳಿಸಬಹುದು ಎಂದಿದ್ದಾರೆ. ಇದಕ್ಕಾಗಿ ಆಧಾರ್ ಕಾರ್ಡ್ ಮಾಹಿತಿಯನ್ನು ಪ್ಯಾನ್ ಕಾರ್ಡ್ ಮಾಹಿತಿಗೆ ಜೋಡಿಸಲು ಕೇಂದ್ರ ಸರ್ಕಾರ ಯೋಜನೆ ಜಾರಿಗೆ ತರಲಿದೆ ಎಂದು ಅವರು ಹೇಳಿದ್ದಾರೆ. ಇದಕ್ಕಾಗಿ ಯಾವುದೇ ವಿಶೇಷ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಅಷ್ಟೇ ಅಲ್ಲ ಈ ವಿಧಾನದಿಂದ ಪ್ಯಾನ್ ಕಾರ್ಡ್ ಗಳಲ್ಲಾಗುತ್ತಿರುವ ಅವ್ಯವಹಾರಕ್ಕೂ ಕೂಡ ಇದರಿಂದ ಕಡಿವಾಣ ಬೀಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜೊತೆಗೆ ಇದರಿಂದ ಪ್ಯಾನ್ ಕಾರ್ಡ್ ಬಳಸಿ ಎಸಗಲಾಗುತ್ತಿರುವ ವಚನೆಗಳ ಮೇಲೂ ಕೂಡ ನಿಗಾವಹಿಸಬಹುದಾಗಿದೆ.
ಇನ್ಮುಂದೆ ಆಧಾರ್ ನಿಂದ ವೆರಿಫಿಕೆಶನ್ ಮಾಡಲಾಗುವುದು
ಈ ಕುರಿತು ತಮ್ಮ ಬಜೆಟ್ ಭಾಷಣದಲ್ಲಿ ಉಲ್ಲೇಖಿಸಿರುವ ಕೇಂದ್ರ ವಿತ್ತ ಸಚಿವೆ, ಇನ್ಮುಂದೆ ಆದಾಯ ತೆರಿಗೆ ಪಾವತಿದಾರರ ವೆರಿಫಿಕೆಶನ್ ಕೂಡ ಆಧಾರ್ ಕಾರ್ಡ್ ಅಡಿ ಮಾಡಲಾಗುವುದು ಎಂದಿದ್ದಾರೆ. ಇದಕ್ಕಾಗಿ ತೆರಿಗೆ ಪಾವತಿದಾರರಿಗೆ ಶೀಘ್ರವೇ ಹೊಸ ಸಿಸ್ಟಮ್ ಜಾರಿಗೆ ತರಲಾಗುವುದು ಎಂದು ಅವರು ಹೇಳಿದ್ದಾರೆ. ಆದಾಯ ತೆರಿಗೆ ಕಾಯ್ದೆಯಡಿ ಯಾವುದೇ ವ್ಯಕ್ತಿ ತಮ್ಮ ಆದಾಯ ತೆರಿಗೆ ಮರುಪಾವತಿ ಮಾಡುವ ಸಂದರ್ಭದಲ್ಲಿ ತಮ್ಮ ಆಧಾರ್ ಸಂಖ್ಯೆ ನೀಡುವುದು ಅನಿವಾರ್ಯವಾಗಿದೆ. ಅಷ್ಟೇ ಅಲ್ಲ ಮಾರ್ಚ್ 31, 2020ರೊಳಗೆ ಆಧಾರ್-ಪ್ಯಾನ್ ಸಂಖ್ಯೆಗಳನ್ನು ಕೂಡ ಲಿಂಕ್ ಮಾಡುವುದು ಅನಿವಾರ್ಯವಾಗಿದೆ. NSDL ಹಾಗೂ UTI-ITSL ಈ ಎರಡು ಏಜೆನ್ಸಿಗಳ ಮೂಲಕ ಆದಾಯ ತೆರಿಗೆ ಇಲಾಖೆ ಪ್ಯಾನ್ ಕಾರ್ಡ್ ಜಾರಿಗೊಳಿಸುತ್ತದೆ.