ನವದೆಹಲಿ: ಭಾರತದ ಪ್ರತಿಷ್ಟಿತ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಯೊಂದನ್ನು ಘೋಷಿಸಿದೆ. ಅದರಂತೆ ಭಾರತ್ ಫೈಬರ್ ಗ್ರಾಹಕರಿಗೆ ಒಂದು ವರ್ಷಗಳ ಅವಧಿಗೆ ಉಚಿತ ಅಮೆಜಾನ್ ಪ್ರೈಮ್ ಸದ್ಯಸ್ಯತ್ವ ನೀಡಲು ಮುಂದಾಗಿದೆ.
ಇತ್ತೀಚಿಗೆ ರಿಲಯನ್ಸ್ ಜಿಯೋ ಗಿಗಾಫೈಬರ್ ಸೇವೆ ಆರಂಭಿಸದ ಬೆನ್ನಲ್ಲೇ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಹೈಸ್ಪೀಡ್ ಫೈಬರ್ ಆಧಾರಿತ ಬ್ರಾಡ್ ಬ್ಯಾಂಡ್ ಸೇವೆ ಆರಂಭಿಸಿ ಈ ಮೂಲಕ ಜಿಯೋ ಗಿಗಾ ಫೈಬರ್ ಗೆ ಟಕ್ಕರ್ ನೀಡಲು ಮುಂದಾಗಿತ್ತು. ಆದರೆ ಫೈಬರ್ ಸೇವೆ ಆರಂಭಿಸಿದ ಕೆಲವೇ ದಿನಗಳಲ್ಲಿ ಬಿಎಸ್ಎನ್ಎಲ್ ಭಾರತ್ ಫೈಬರ್ ಗ್ರಾಹಕರಿಗೆ ವಿಶೇಷ ಕೊಡುಗೆ ಘೋಷಿಸಿದೆ.
ಸಾಮಾನ್ಯ ಗ್ರಾಹಕರು ಒಂದು ವರ್ಷದ ಅಮೆಜಾನ್ ಪ್ರೈಮ್ ಸದಸ್ಯತ್ವ ಪಡೆಯಲು 999 ರೂ. ಪಾವತಿಸಬೇಕಾಗುತ್ತದೆ. ಆದರೆ, ಭಾರತ್ ಫೈಬರ್ ಗ್ರಾಹಕರಿಗೆ ಬಿಎಸ್ಎನ್ಎಲ್ ಈ ಸೇವೆಯನ್ನು ಉಚಿತವಾಗಿ ನೀಡಲಿದೆ. ಈ ಕೊಡುಗೆ 18ಜಿಬಿ ಗಿಂತಲೂ ಮೇಲ್ಪಟ್ಟ ಪ್ಲಾನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಅನ್ವಯವಾಗಲಿದೆ.
ಭಾರತ್ ಫೈಬರ್ ನಲ್ಲಿ ಗ್ರಾಹಕರಿಗೆ ಪ್ರತಿ ದಿನ 35 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದ್ದು, ಬ್ರೌಸಿಂಗ್, ವಿಡಿಯೋ ಸ್ಟ್ರೀಮಿಂಗ್, ಗೇಮಿಂಗ್ ಸೇರಿದಂತೆ ಇಂಟರ್ನೆಟ್ ಬಳಕೆ ಸುಗಮವಾಗಲಿದೆ. ಅಲ್ಲದೆ, ಬಳಕೆದಾರಿಗೆ ಒಂದು ಜಿಬಿ ಡೇಟಾಗೆ ಕೇವಲ 1.1 ರೂ. ವೆಚ್ಚವಾಗಲಿದೆ. ಆಸಕ್ತ ಗ್ರಾಹಕರು ಬಿಎಸ್‌ಎನ್‌ಎಲ್ ನ ಅಧಿಕೃತ ವೆಬ್ಸೈಟ್ ನಲ್ಲಿ ಭಾರತ್ ಫೈಬರ್ ಸೇವೆಗೆ ನೋಂದಣಿ ಮಾಡಿಕೊಳ್ಳಬಹುದು.