ನವದೆಹಲಿ : ಇಲ್ಲಿನ ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ನಿರ್ಮಾಣವಾಗಿರುವ ಬಿಜೆಪಿಯ ನೂತನ ಐಷಾರಾಮಿ ಮತ್ತು ಹೈಟೆಕ್ ಕೇಂದ್ರೀಯ ಕಚೇರಿಯನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಭಾನುವಾರ ಉದ್ಘಾಟಿಸಿದರು.
ಈ ಮೂಲಕ ಇದೇ ಮೊದಲ ಬಾರಿಗೆ ಲ್ಯುಟೈನ್ಸ್ ಬಂಗಲೆ ವಲಯದಿಂದ ಹೊರಬಂದು ನೂತನ ಕಚೇರಿ ಸ್ಥಾಪಿಸಿದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ.
ಪಕ್ಷದ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜ್ನಾಥ್ ಸಿಂಗ್, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಪಕ್ಷದ ಇತರ ಹಿರಿಯ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಚೇರಿಯ ನಿರ್ಮಾಣ ಕಾರ್ಯವನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಿ, ಬಿಜೆಪಿಗೆ ಹೊಸ ಮನೆಗೆ ಹೋಗುವುದಕ್ಕೆ ಕಾರಣರಾದ ಪಕ್ಷದ ಅಧ್ಯಕ್ಷರು ಮತ್ತು ಅವರ ತಂಡವನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಅಭಿನಂದಿಸಿದರು. "ನಿಗದಿತ ಸಮಯ ಚೌಕಟ್ಟಿನೊಳಗೆ ಬಿಜೆಪಿ ಮುಖ್ಯ ಕಚೇರಿ ಕೆಲಸವನ್ನು ಪೂರ್ಣಗೊಳಿಸಲು ಶ್ರಮಿಸಿದ ಅಮಿತ್ ಭಾಯಿ ಮತ್ತು ಅವರ ಸಂಪೂರ್ಣ ತಂಡಕ್ಕೆ ಧನ್ಯವಾದ ಹೇಳಬೇಕೆಂದು ನಾನು ಬಯಸುತ್ತೇನೆ" ಎಂದು ಪ್ರಧಾನಿ ಹೇಳಿದರು.
ರಾಜಕೀಯ ಪಕ್ಷಗಳ ಕಚೇರಿಗಳನ್ನು ಲ್ಯುಟೈನ್ಸ್ ಬಂಗಲೆ ವಲಯದಿಂದ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ ಆ ವಲಯದಿಂದ ಹೊರಬಂದು ದೀನದಯಾಳ್ ಉಪಾಧ್ಯಾಯ ಮಾರ್ಗದಲ್ಲಿ ನೂತನ ಕಚೇರಿ ಆರಂಭಿಸಿದ ಮೊದಲ ರಾಷ್ಟ್ರೀಯ ಪಕ್ಷ ಬಿಜೆಪಿ ಆಗಿದೆ.
ಕಚೇರಿಯ ವಿಶೇಷತೆ :
ಕಳೆದ ವರ್ಷ ಆಗಸ್ಟ್ನಲ್ಲಿ ಈ ಬೃಹತ್ ಕಚೇರಿಯ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಾಗಿತ್ತು. ಮುಂಬೈ ಮೂಲದ ವಾಸ್ತುಶಿಲ್ಪ ಕಂಪೆನಿ ಕಚೇರಿಯನ್ನು ವಿನ್ಯಾಸಗೊಳಿಸಿದೆ. 2 ಎಕರೆಯಲ್ಲಿರುವ ಐದು ಮಹಡಿಗಳ ಕಟ್ಟಡವನ್ನು ಈ ಕಚೇರಿ ಹೊಂದಿದ್ದು, 400 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಅಲ್ಲದೆ, 70 ಸುಸಜ್ಜಿತ ಕೊಠಡಿಗಳು, ಬಯೋ ಟಾಯ್ಲೆಟ್, ಬಿಸಿ ನೀರು ಮತ್ತು ವಿದ್ಯುತ್ಗೆ ಭಾಗಶಃ ಸೋಲಾರ್ ವ್ಯವಸ್ಥೆ, ವೈಫೈ ಸೌಲಭ್ಯ, 600 ಜನರಿಗೆ ಆಸನಗಳಿರುವ ಸಭಾಂಗಣ, ಟಿವಿ ಸ್ಟುಡಿಯೋ, ವಸತಿಗಾಗಿ 7 ಮಹಡಿಗಳ ಜೋಡಿ ಕಟ್ಟಡ, ಪ್ರಧಾನ ಕಾರ್ಯದರ್ಶಿಗಳಿಗೆ ಪ್ರತ್ಯೇಕ ಕೊಠಡಿಗಳು, ದೆಹಲಿಯಲ್ಲಿ ಕೆಲಸಕ್ಕಾಗಿ ತಂಗುವ ಕಾರ್ಯಕರ್ತರಿಗೆ 25 ಕೊಠಡಿಗಳೊಂದಿಗೆ ಆವರಣದಲ್ಲಿ ಆಧುನಿಕ ಸಂವಹನ ಸಾಧನಗಳೊಂದಿಗೆ ಅಳವಡಿಸಲಾಗಿರುವ ಮೂರು ಕಟ್ಟಡಗಳನ್ನು ಈ ಕಚೇರಿ ಹೊಂದಿದೆ.