ನವದೆಹಲಿ: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಉಪಸ್ಥಿತಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ (ಸಿಇಸಿ) ಸಭೆ ಮಂಗಳವಾರ ಸಂಜೆ ಪ್ರಾರಂಭವಾಗಿ ಬುಧವಾರ ಬೆಳಗಿನ ಜಾವ 5 ಗಂಟೆವರೆಗೆ ನಡೆದಿದೆ. ಇಂದೂ ಸಹ ಈ ಸಭೆ ಮುಂದುವರೆಯಲಿದ್ದು ಸಭೆಯಲ್ಲಿ ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು.
ಮೂಲಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ರಾತ್ರಿಯಿಡೀ ನಡೆದ ಸಭೆಯಲ್ಲಿ ಹಲವು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ವೇಳೆ ಹಲವು ಹಾಲಿ ಸಂಸದರಿಗೆ ಟಿಕೆಟ್ ನೀಡದೇ ಇರಲು ಕೂಡ ನಿರ್ಧರಿಸಲಾಗಿದೆ. ಮೂಲಗಳ ಪ್ರಕಾರ, ಅಮೇಥಿಯಿಂದ ಸ್ಮೃತಿ ಇರಾನಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಇದೇ ವೇಳೆ ಬೆಗುಸಾರೈನಿಂದ ಗಿರಿರಾಜ್ ಸಿಂಗ್ ಅವರಿಗೆ ಟಿಕೆಟ್ ನೀಡುವ ಸಂಭವವಿದೆ.
ಏತನ್ಮಧ್ಯೆ, ಛತ್ತೀಸ್ಗಢದ ಹಾಲಿ ಸಂಸದರಿಗೆ ಟಿಕೆಟ್ ಕಡಿತಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದ್ದು, ಛತ್ತೀಸ್ಗಢದ ಮಾಜಿ ಸಿಎಂ ರಮಣ್ ಸಿಂಗ್ ಪುತ್ರ ಸೇರಿದಂತೆ 10 ಸಂಸದರಿಗೆ ಟಿಕೆಟ್ ನೀಡದಿರಲು ಪಕ್ಷ ನಿರ್ಧರಿಸಿದೆ. ಈ ಸ್ಥಾನಗಳಿಗೆ ಹೊಸ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ.
ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಛತ್ತೀಸ್ಗಢದ ಕೋರ್ ಗ್ರೂಪ್ ನೊಂದಿಗೆ ಸಭೆ ನಡೆಸಿ 11 ಹೊಸ ಅಭ್ಯರ್ಥಿಗಳ ಹೆಸರನ್ನು ಸೂಚಿಸುವಂತೆ ಒಂದು ದಿನದ ಕಾಲಾವಕಾಶ ನೀಡಿದೆ.
ಕಳೆದ ವರ್ಷ ನಡೆದ ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.