ನವದೆಹಲಿ: ಸಂವಿಧಾನವನ್ನು ಉಳಿಸಲು ಪ್ರಧಾನಿ ನರೇಂದ್ರ ಮೋದಿಯನ್ನು ಹತ್ಯೆ ಮಾಡಬೇಕು ಎಂದು ಮಧ್ಯಪ್ರದೇಶದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕನೊಬ್ಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಕೈ’ ನಾಯಕನ ಹೇಳಿಕೆ ಇದೀಗ ದೊಡ್ಡ ವಿವಾದ ಸೃಷ್ಟಿಸಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕದನ ಶುರುವಾಗಿದೆ.
ಸಂವಿಧಾನವನ್ನು ಉಳಿಸಬೇಕಾದರೆ ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧವೆಂದು ಕಾಂಗ್ರೆಸ್ ನಾಯಕ ರಾಜಾ ಪಟೇರಿಯಾ ಹೇಳಿದ್ದಾರೆ. ಪ್ರಧಾನಿ ಮೋದಿಯನ್ನು ಕೊಲ್ಲಲು ಸಿದ್ಧರಾಗಿ ಅಂತಾ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮಾಜಿ ಸಚಿವ ರಾಜಾ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ಕಿಡಿಕಾರಿದೆ.
ಇದನ್ನೂ ಓದಿ: ADR Report : ಗುಜರಾತ್ ಚುನಾವಣೆಯಲ್ಲಿ ಗೆದ್ದ 40 ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್!
ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವಂತೆ ಬಹಿರಂಗವಾಗಿಯೇ ಹೇಳಿಕೆ ನೀಡಿರುವ ರಾಜಾ ಪಟೇರಿಯಾ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ರಾಜ್ಯ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಹೇಳಿದ್ದಾರೆ. ಕೊಲೆ ಬೆದರಿಕೆ ಹಾಕುವ ಮೂಳಕ ಕಾಂಗ್ರೆಸ್ ನಾಯಕ ಜನರನ್ನು ಪ್ರಚೋದಿಸುತ್ತಿದ್ದಾರೆ. ಪ್ರಧಾನಿಯನ್ನು ಕೊಲ್ಲಲು ಪ್ರಚೋದಿಸುವುದು ಅತ್ಯಂತ ಗಂಭೀರ ಮತ್ತು ಖಂಡನೀಯ. ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ರಾಹುಲ್ ಗಾಂಧಿ ನಡೆಸಿದ ‘ಭಾರತ್ ಜೋಡೋ ಯಾತ್ರೆ’ಯಲ್ಲಿ ಏನಾದರೂ ಷಡ್ಯಂತ್ರಕ್ಕೆ ಸಿದ್ಧತೆ ನಡೆದಿದೆಯೇ? ಈ ಬಗ್ಗೆ ತನಿಖೆಯಾಗಬೇಕೆಂದು ಅರು ಆಗ್ರಹಿಸಿದ್ದಾರೆ.
ಸಂವಿಧಾನವನ್ನು ಉಳಿಸಬೇಕಿದೆ!
ಮಧ್ಯಪ್ರದೇಶದ ಪಾವಾಯಿಯ ಪನ್ನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದ ರಾಜಾ ಪಟೇರಿಯಾ, ‘ದೇಶದ ಸಂವಿಧಾನವನ್ನು ಉಳಿಸಬೇಕಾದರೆ ಮತ್ತು ಆದಿವಾಸಿಗಳ ರಕ್ಷಣೆಯಾಗಬೇಕಾದರೆ ಮೋದಿಯನ್ನು ಕೊಲ್ಲಲು ಸಿದ್ಧರಾಗಿರಿ. ಇನ್ನು ನಮ್ಮ ದೇಶದ ರಾಜಕೀಯದಲ್ಲಿ ಸೌಹಾರ್ದತೆ ಮತ್ತು ಸಹೋದರತ್ವದ ನಡುವೆ ಯಾವುದೇ ಸಂಬಂಧವಿಲ್ಲ. ಈಗ ರಾಜಕೀಯ ಸೇಡಿನ ಭಾವ ಬಹಿರಂಗವಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ರಾಜಕೀಯ ಭಾಷೆಯ ಮಟ್ಟ ನಿರಂತರವಾಗಿ ಕುಸಿಯುತ್ತಿದೆ’ ಎಂದು ಹೇಳಿದ್ದರು.
ಇದನ್ನೂ ಓದಿ: Auto Strike: ಬೈಕ್ ಟ್ಯಾಕ್ಸಿ ವಿರುದ್ಧ ಸಮರ, ಇಂದಿನಿಂದ ಆಟೋ ರಿಕ್ಷಾ ಯೂನಿಯನ್ ಮುಷ್ಕರ!
ಕಾಂಗ್ರೆಸ್ vs ಬಿಜೆಪಿ ಸಮರ!
ರಾಜಾ ಪಟೇರಿಯಾ ವಿವಾದಾತ್ಮಕ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ನಾಯಕನ ಹೇಳಿಕೆ ಖಂಡಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ‘ಇದು ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಲ್ಲ, ಇಟಲಿಯ ಕಾಂಗ್ರೆಸ್. ಇಟಲಿಯ ಮನಸ್ಥಿತಿಯು ಮುಸೊಲಿನಿಯದ್ದೇ ಆಗಿದೆ ಎಂಬುದು ರಾಜಾ ಹೇಳಿಕೆಗಳಿಂದ ಸ್ಪಷ್ಟವಾಗುತ್ತಿದೆ’ ಅಂತಾ ಟೀಕಿಸಿದ್ದಾರೆ. ಕಾಂಗ್ರೆಸ್ ಜೊತೆ ಸೇರಿಕೊಂಡು ಸ್ವರಾ ಭಾಸ್ಕರ್, ಕನ್ಹಯ್ಯಾ ಕುಮಾರ್, ಸುಶಾಂತ್ ದೇಶವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿರುವ ಕಾಂಗ್ರೆಸ್ ನಾಯಕ ವಿರುದ್ಧ ಕೂಡಲೇ ಎಫ್ಐಆರ್ ದಾಖಲಿಸುವಂತೆ ಪನ್ನಾ ಎಸ್ಪಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.